ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಸಿಎಂ ಯಡಿಯೂರಪ್ಪ.

100
firstsuddi

ಬೆಂಗಳೂರು : ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್ ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ ಎಂದರು.

75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಶಿವಮೊಗ್ಗದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿದೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನ ಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ರಚನೆಯಾಗಿತ್ತು. ಅಂದು ವಾಜಪೇಯಿ ಅವರು ಕೇಂದ್ರದ ಸಚಿವರಾಗುವಂತೆ ಹೇಳಿದ್ದರು. ಅದರೆ ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಹೇಳಿದೆ ಎಂದು ಸಿಎಂ ಭಾವುಕರಾದರು.