ಮೂಡಿಗೆರೆ : ಬಣಕಲ್ ಕಸಾಪ ವತಿಯಿಂದ ಹೆಸರ ಹರುಷ ಸಾಹಿತ್ಯ ಸ್ಪರ್ಶ ಕಾರ್ಯಕ್ರಮ…

305
firstsuddi

ಕೊಟ್ಟಿಗೆಹಾರ : ಉತ್ತಮ ಜೀವನಮೌಲ್ಯಗಳಿಂದ ಮಕ್ಕಳ ವ್ಯಕ್ತಿತ್ವ ರೂಪಿಸುವ ಅಗತ್ಯವಿದ್ದು ಅದಕ್ಕೆ ಪೂರಕವಾದ ವಾತಾವರಣವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಣಕಲ್‍ನ ಕುವೆಂಪುನಗರದ ಅಶ್ವಿನಿ ಸುನೀಲ್ ದಂಪತಿಗಳ ಪುತ್ರಿ ರಿಯಾಳ ನಾಮಕರಣ ಕಾರ್ಯಕ್ರಮದಲ್ಲಿ ಮೂಡಿಗೆರೆ ಹಾಗೂ ಬಣಕಲ್ ಕಸಾಪ ವತಿಯಿಂದ ನಡೆದ ಹೆಸರ ಹರುಷ ಸಾಹಿತ್ಯ ಸ್ಪರ್ಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುವೆಂಪು ಅವರು ಹೇಳಿದಂತೆ ಮಗು ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತದೆ. ಆದೆ ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ. ಮನುಷ್ಯ ಧರ್ಮ ಮತ್ತು ಜಾತಿಗಳ ಬಂಧನ ಮೀರಿ ವಿಶ್ವಮಾನವನಾಗಬೇಕು. ಮನೆಯಲ್ಲಿ ಮಗು ಹುಟ್ಟಿದಾಗ ಮನೆಯಲ್ಲಿ ತಂದೆ ತಾಯಿ ಅಜ್ಜ ಅಜ್ಜಿಯೂ ಹುಟ್ಟುತ್ತಾರೆ. ಹತ್ತಾರು ಸಂಬಂಧಗಳು ಮಗುವಿನ ಜೊತೆಗೆ ಹುಟ್ಟುತ್ತದೆ. ಮಗು ಬೆಳೆದಂತೆ ಸಂಬಂಧಗಳು ಮತ್ತಷ್ಟು ಆಪ್ತಗೊಳ್ಳುತ್ತದೆ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್ಗೋಡು ಮಾತನಾಡಿ ಕಸಾಪ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಮದುವೆ ಮನೆಗಳಲ್ಲಿ ಕಸಾಪ ವತಿಯಿಂದ ಕಾರ್ಯಕ್ರಮಗಳನ್ನು ನಡೆಸಿ ಮದುವೆ ಕಾರ್ಯಕ್ರಮಕ್ಕೆ ಸಾಹಿತ್ಯ ಸ್ಪರ್ಶ ನೀಡಲಾಗಿದೆ. ನಾಮಕರಣ ಕಾರ್ಯಕ್ರಮದಲ್ಲೂ ಕಾರ್ಯಕ್ರಮ ನಡೆಸುವ ಈ ಪ್ರಯತ್ನ ಸಾಹಿತ್ಯದ ಅಭಿರುಚಿಯನ್ನು ಜನಸಾಮಾನ್ಯರಲ್ಲಿಯೂ ಮೂಡಿಸುತ್ತದೆ ಎಂದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಬಕ್ಕಿ ಮಂಜುನಾಥ್, ಮಲ್ನಾಡ್ ಗಲ್ಪ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ ಮಾತನಾಡಿದರು. ಗಾಯಕರಾದ ಜಯಪಾಲ್, ಬಕ್ಕಿ ಮಂಜುನಾಥ್, ಶ್ರೀಧರ್, ಸಹನಾ, ಸ್ಪಂದನಾ ಅವರು ಕನ್ನಡ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್‍ನ ತಾಲ್ಲೂಕು ಕಾರ್ಯದರ್ಶಿ ಜಯಪಾಲ್, ತಾಲ್ಲೂಕು ಕಸಾಪ ಪಧಾಧಿಕಾರಿಗಳಾದ ಎಂ.ಎಸ್ ನಾಗರಾಜ್, ಹಾ.ಬಾ ನಾಗೇಶ್, ದಂಪತಿಗಳಾದ ಸುನೀಲ್ ಅಶ್ವಿನಿ, ಕುಟುಂಬ ಸದಸ್ಯರಾದ ವೇಲಾಯುದನ್, ಸರೋಜಮ್ಮ, ಮುಂತಾದವರು ಇದ್ದರು.