ಮೂಡಿಗೆರೆ : ಹೊಕ್ಕಳ್ಳಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ…

1756
firstsuddi

ಕೊಟ್ಟಿಗೆಹಾರ : ಬಿ ಹೊಸಳ್ಳಿ ಗ್ರಾ,ಪಂ ವ್ಯಾಪ್ತಿಯ ಹೊಕ್ಕಳ್ಳಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಹೊಕ್ಕಳ್ಳಿ ಗ್ರಾಮದ ರವಿ ಎಂಬುವವರು ತೋಟಕ್ಕೆ ಹೋಗುತ್ತಿದ್ದ ಸಂದರ್ಭ ಗದ್ದೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಹುಲಿಯ ಚಿತ್ರವನ್ನು ದೂರದಿಂದಲೇ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಹಲವು ತಿಂಗಳುಗಳಿಂದ ಹೊಕ್ಕಳ್ಳಿ, ಭಾರತಿ ಬೈಲ್ ಭಾಗದಲ್ಲಿ ಈ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು ಹಲವಾರು ಜಾನುವಾರುಗಳನ್ನು ಕೊಂದು ಹಾಕಿದೆ. ಹುಲಿಯ ಭಯದಿಂದಾಗಿ ಕಾರ್ಮಿಕರು, ರೈತರು ಕೂಡ ತೋಟಕ್ಕೆ ಹೋಗಲು ಹಿಂಜರಿಯುವಂತಾಗಿದೆ. ಅರಣ್ಯ ಅಧಿಕಾರಿಗಳು ಹುಲಿ ಕಾಣಿಸಿಕೊಂಡಾಗ ಗ್ರಾಮಕ್ಕೆ ಬಂದು ಪಟಾಕಿ ಸಿಡಿಸಿ ಹುಲಿಯನ್ನು ಕಾಡಿಗೆ ಅಟ್ಟುತ್ತಾರೆ. ಆದರೆ ಕೆಲದಿನಗಳ ನಂತರ ಹುಲಿ ಮತ್ತೆ ನಾಡಿನತ್ತ ಮುಖ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ಉಮೇಶ್ ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.