ಯುವತಿ ಮೇಲೆ ಅತ್ಯಾಚಾರ – ಚಳ್ಳಕೆರೆ ಪೊಲೀಸ್ ಠಾಣೆ ಸಿಪಿಐ ವಿರುದ್ಧ ಕೇಸ್ ದಾಖಲು…

77
firstsuddi

ಚಿತ್ರದುರ್ಗ : ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ರೇಪ್ ಕೇಸ್ ದಾಖಲಾಗಿದೆ.

ಯುವತಿ ಶಿವಮೊಗ್ಗದಲ್ಲಿ ಬಿಇಡಿ ಓದುತ್ತಿದ್ದು, ಇದೀಗ ಈಕೆ ಸೋದರ ಮಾವನ ಮಗನಾಗಿರುವ ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

5 ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಯುವತಿಯ ಕುಟುಂಬಸ್ಥರು ಉಮೇಶ್ ಬಳಿ ಸಹಾಯ ಕೇಳಿದ್ದರು. ಅದರಂತೆ ಚಿತ್ರದುರ್ಗದಿಂದ ದಾವಣಗೆರೆಗೆ ಯುವತಿಯನ್ನು ಕರೆಸಿಕೊಂಡ ಉಮೇಶ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದನು. ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಕೇಳಿಬಂದಿದೆ.

ಸಿಪಿಐ ಉಮೇಶ್ ಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದಾರೆ. ಮೂರನೇ ಪತ್ನಿಯಾಗಿ ಇರುವಂತೆ ಸಿಪಿಐ ಉಮೇಶ್ ಒತ್ತಡ ಹೇರಿದ್ದಾನೆ. ದಾವಣಗೆರೆಯ ನಿವೇಶನ ನಿನಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ-ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾಳೆ.

ಕಲಂ 376 ಕ್ಲಾಸ್ (2)(k)(n), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾನೆ.