ರಣದೀಪ್ ಸುರ್ಜೇವಾಲ ವಿರುದ್ಧವೇ ಸಚಿವರ ಆಕ್ರೋಶ.

43

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಆಂತರಿಕ ಸಂಘರ್ಷ ತಾರಕಕ್ಕೇರುತ್ತಿದ್ದು, ಇದೀಗ ಕೆಲವು ಮಂದಿ ಸಚಿವರ ಆಕ್ರೋಶ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರತ್ತ ತಿರುಗಿದೆ. ಸುರ್ಜೇವಾಲ ವಿರುದ್ಧ ಕೆಲವು ಮಂದಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ. ನಮ್ಮ ಹಿನ್ನಡೆಗೆ ಸುರ್ಜೇವಾಲ ಕಾರಣರಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ವೇಳೆ ಕೆಲವು ಜನ ಸಚಿವರು ಅಳಲುತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುರ್ಜೇವಾಲರನ್ನು ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳಿ ಎಂದು ಹೈಕಮಾಂಡ್‍ಗೆ ತಿಳಿಸಿ ಒತ್ತಡ ಹೇರಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಆಪ್ತ ಸಚಿವರು, ಶಾಸಕರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಸನದಲ್ಲಿ ನಡೆದಿದ್ದ ಸ್ವಾಭಿಮಾನ ಸಮಾವೇಶ ಹೆಸರು ಬದಲಾವಣೆ, ದಲಿತ ಸಚಿವರ ಔತಣಕೂಟಕ್ಕೆ ಬ್ರೇಕ್ ಹಾಕಿರುವುದು, ಬೆಳಗಾವಿಯಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಸುರ್ಜೇವಾಲ ವಿರುದ್ಧ ಸಚಿವರ ಸಿಟ್ಟಿಗೆ ಕಾರಣವಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಬಳಿ ನೇರವಾಗಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.