ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ಐದು ಪಂದ್ಯಗಳ ಈ ಸಾಲಿನಲ್ಲಿ ಈಗಾಗಲೇ 4 ಪಂದ್ಯಗಳು ಮುಗಿದಿವೆ. 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಜನವರಿ 5 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ದೃಷ್ಟಿಯಿಂದ 5ನೇ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲ ಮಡಿಯಂತಾಗಿದೆ. ಕಾರಣ 4ನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿರುವ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ನೇರವಾಗಿ ಪ್ರವೇಶ ಪಡೆಯುವ ಅರ್ಹತೆ ಕಳೆದುಕೊಂಡಿದೆ. ಆದರೂ ಟೀಂ ಇಂಡಿಯಾ ಫೈನಲ್‍ಗೆ ಪ್ರವೇಶಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದರೆ ಮಾತ್ರ ಭಾರತ ಫೈನಲ್‍ಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಫೈನಲ್ ಕನಸು ನುಚ್ಚುನೂರಾಗುತ್ತದೆ. ಈ ಹಿನ್ನೆಲೆ 5ನೇ ಟೆಸ್ಟ್ ಪಂದ್ಯದಲ್ಲಿ ಭಾರಿ ಬದಲಾವಣೆಯೊಂದಿಗೆ ಭಾರತ ತಂಡ ಅಂಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಯಾರು ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ ಶುಭಮನ್ ಗಿಲ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಮುಂದಿನ ಪಂದ್ಯವನ್ನು ಗೆಲ್ಲುವ ಜೊತೆಗೆ ಈ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲಿದೆಯಾ ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇವುಗಳ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ 2024ರ ಅತ್ಯುತ್ತಮ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದ್ದಾರೆ.










