ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ, ‘ಮಾರ್ಟಿನ್’ ಚಿತ್ರತಂಡ…

64
firstsuddi

ಬೆಂಗಳೂರು: ಸಂಭವಿಸಬಹುದಾಗಿದ್ದ ಭೀಕರ ವಿಮಾನ ಅಪಘಾತ ದುರಂತದಿಂದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ ಪಾರಾಗಿದೆ. ಸದ್ಯ ಚಿತ್ರತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.

ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್’ ಸಿನಿಮಾ ತಂಡದವರು ವಿಮಾನ ದುರಂತದಿಂದ ಪಾರಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ನಡೆದಿದ್ದೇನು? ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್ ಚಿತ್ರತಂಡವು ನಿನ್ನೆ ಸಂಜೆ ಸಾಂಗ್ ಶೂಟ್‍ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಹವಾಮಾನ ವೈಪರೀತ್ಯದಿಂದಾಗಿ ರಾಡಾರ್ ಕಂಟ್ರೋಲ್ ತಪ್ಪಿದ್ದ ವಿಮಾನ ಕಾರ್ಗಿಲ್ ಪ್ರದೇಶಕ್ಕೂ ಹೋಗಿ ಹಠಾತ್ತನೆ ಸಾವಿರಾರು ಅಡಿ ಕೆಳಗಿಳಿದು ಪೈಲೆಟ್ ಕಂಟ್ರೋಲ್ ತಪ್ಪಿದೆ ಎಂದು ತಿಳಿದು ಬಂದಿದೆ.

ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್ ತಂಡವೂ ದನಿಗೂಡಿಸಿದೆ.