ಶಾಲೆಗೆ ಆಗಮಿಸಿದ ಚಿಣ್ಣರು; ಹೂವು, ಸಿಹಿ ನೀಡಿ ಸ್ವಾಗತ…

128
firstsuddi

ಚಿಕ್ಕಮಗಳೂರು : ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ಜನಪ್ರತಿನಿಧಿಗಳು ಇಂದು ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದರು.

ಬೇಸಿಗೆ ರಜೆ ಕಳೆದು ಶಾಲೆ ಮರು ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣ ಮತ್ತು ಬ್ಯಾನರ್‍ ಗಳಿಂದ ಅಲಂಕರಿಸಲಾಗಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.

ಒಂದು ತಿಂಗಳ ರಜೆ ಮುಗಿಸಿ ಪಂಜರದಿಂದ ಹೊರಬಂದ ಹಕ್ಕಿಗಳಂತೆ ಕುಣಿದು ಕುಪ್ಪಳಿಸುತ್ತ ಬೆಳಿಗ್ಗೆ ಶಾಲೆಗೆ ಆಗಮಿಸಿದ ಚಿಣ್ಣರನ್ನು ಅಧಿಕಾರಿಗಳು, ಶಿಕ್ಷಕರು, ಜನಪ್ರತಿನಿಧಿಗಳು ಆರತಿ ಎತ್ತಿ ಅವರ ಮೇಲೆ ಪುಷ್ಪವೃಷ್ಠಿ ಮಾಡಿ ಗುಲಾಬಿ ಹೂ ಮತ್ತು ಸಿಹಿ ನೀಡಿ ಸಂಭ್ರಮದಿಂದ ಬರಮಾಡಿಕೊಂಡರು.

ನಂತರ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿ ವಿದ್ಯೆ ಕರುಣಿಸುವಂತೆ ಪ್ರಾರ್ಥಿಸಿದರು. ಶಾಲೆ ಮರು ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಬ್ಬದೂಟವನ್ನು ಬಡಿಸಲಾಯಿತು.

ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಶೈಕ್ಷಣಿಕ ವರ್ಷದ ಪ್ರಾರಂಭದ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ 336 ಸರ್ಕಾರಿ ಶಾಲೆಗಳು 29 ಅನುದಾನಿತ ಹಾಗೂ 81 ಅನುದಾನ ರಹಿತ ಶಾಲೆಗಳೂ ಇಂದು ಆರಂಭಗೊಂಡಿವೆ ಎಂದು ತಿಳಿಸಿದರು.
ಮಹಾಮಾರಿ ಕೊರೋನಾದಿಂದಾಗಿ ಕಳೆದ 2 ವರ್ಷಗಳ ಕಾಲ ಮೊಟಕುಗೊಂಡಿದ್ದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ನಿಟ್ಟಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ವರ್ಷ ನಡೆಸಲಾಗುವುದು ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ಇಂದಿನಿಂದ ಮಕ್ಕಳ ದಾಖಲಾತಿ ಆಂದೋಲನ ಆರಂಭವಾಗಿದ್ದು, ಅದರಡಿಯಲ್ಲಿ ಮನೆಮನೆಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಪೋಷಕರ ಮನವೊಲಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಮಂಜುನಾಥ್, ನಗರಸಭಾ ಸದಸ್ಯೆ ರೂಪಾ ಕುಮಾರ್, ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಜರಿದ್ದರು.