ಶಾಸಕ ಕೆ.ಜಿ ಬೋಪಯ್ಯ ವಿರುದ್ಧ ದೂರು ದಾಖಲು…

61
firstsuddi

ಮಡಿಕೇರಿ: ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ವಿರುದ್ಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣೆಗೆ ಸ್ಪರ್ಧಿಸಲು ಬೋಪಯ್ಯ ತಮ್ಮ ವಯಸ್ಸನ್ನು ತಿದ್ದಿ, ತಪ್ಪು ಮಾಹಿತಿ ನೀಡಿ ನಾಮಪತ್ರ ಸಲ್ಲಿಸಿದ್ದರು ಎಂದು ಪಿ.ಬಿ ತಿಮ್ಮಯ್ಯ ಎಂಬವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ವಿರಾಜಪೇಟೆ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಕೆ.ಜಿ ಬೋಪಯ್ಯ 1979ರ ಅಕ್ಟೋಬರ್ನಲ್ಲಿ ಬಾರ್ ಕೌನ್ಸಿಲ್ ವಕೀಲರಾಗಿದ್ದರು. ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿದ್ದರು. ಆದರೆ ಬೋಪಯ್ಯನವರು 2004 ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು 53 ವರ್ಷ ಆಗಿತ್ತು. ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು.

2013ರ ಚುನಾವಣೆಯಲ್ಲಿ ಅವರ ವಯಸ್ಸು 61 ವರ್ಷ ಆಗಿತ್ತು. ಆದರೆ ಅವರು ಚುನಾವಣಾ ಆಯೋಗಕ್ಕೆ 58 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದರು. ಮತ್ತು 2018ರ ಚುನಾವಣೆಯಲ್ಲಿ ಅವರ ವಯಸ್ಸು 67 ಆಗಿತ್ತು. ಆದರೆ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರ ತಿಮ್ಮಯ್ಯ ಆರೋಪಿಸಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ದಾಖಲಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಪಯ್ಯ, ಪ್ರತಿ ಚುನಾವಣೆ ಬಂದಾಗ ನನ್ನ ವಿರುದ್ಧ ಇಂತಹ ಆರೋಪ ಮಾಡುವ ಗ್ಯಾಂಗ್ ಮಡಿಕೇರಿಯಲ್ಲಿದೆ. ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ ಆರೋಪದ ದೂರು ದಾಖಲಾಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನನ್ನ ತಂದೆ ಕೊಟ್ಟಿರುವ ದಿನಾಂಕವನ್ನೇ ನಾನು ಫಾಲೋ ಮಾಡುತ್ತಾ ಬಂದಿದ್ದೇನೆ ಎಂದಿದ್ದಾರೆ.