ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ 10 ಬಿಜೆಪಿ ಸಂಸದರು…

52
firstsuddi

ನವದೆಹಲಿ: ಇತ್ತೀಚಿಗಷ್ಟೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ 10 ಮಂದಿ ಬಿಜೆಪಿ ಸಂಸದರು ಇಂದು ತಮ್ಮ ಸಂಸತ್ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಸಂಸದರು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದು, ಶಾಸಕರಾಗಿ ಮುಂದುವರೆಯಲಿದ್ದಾರೆ. ಮಧ್ಯಪ್ರದೇಶದಿಂದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ರಿತಿ ಪಾಠಕ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಸ್ಥಾನದಿಂದ ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾ ಮತ್ತು ದಿಯಾ ಕುಮಾರಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಛತ್ತೀಸ್‌ಗಢದಿಂದ ಅರುಣ್ ಸಾವೊ ಮತ್ತು ಗೋಮತಿ ಸಾಯಿ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸತ್ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಒಂದೇ ಅಧಿಕಾರವನ್ನು ಅಥವಾ ಸದಸ್ಯತ್ವವನ್ನು ಹೊಂದಿರಬೇಕು. ಈ ನಿಯಮಕ್ಕೆ ಅನುಸಾರವಾಗಿ ಮೂರು ರಾಜ್ಯದಲ್ಲಿ ಗೆದ್ದ ಸಂಸದರು ಒಂದಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇನ್ನು ಇಬ್ಬರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಒಂದು ರಾಜಸ್ಥಾನದ ಅಲ್ವಾರ್‌ನಿಂದ ಸ್ಪರ್ಧಿಸಿದ ಬಾಬಾ ಬಾಲಕನಾಥ್ ಮತ್ತು ಛತ್ತೀಸ್‌ಗಢದ ಸರ್ಗುಜಾನಿಂದ ಸ್ಪರ್ಧಿಸಿದ ರೇಣುಕಾ ಸಿಂಗ್. ಇವರು ಕೂಡ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತಗಳನ್ನು ಪಡೆದು ಕಾಂಗ್ರೆಸ್ ಅನ್ನು ಮಣಿಸಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆಯೇ ಸಂಸದರು ರಾಜೀನಾಮೆ ನೀಡಿದ್ದಾರೆ.