ಸತತ 5ನೇ ಬಾರಿಗೆ ರೆಪೊ ದರ ಹೆಚ್ಚಿಸಿದ ಆರ್​ಬಿಐ.

63
firstsuddi

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಸತತ 5ನೇ ಬಾರಿಗೆ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿಸಿದೆ. ಇದರೊಂದಿಗೆ, ಪರಿಷ್ಕೃತ ರೆಪೊ ದರ ಶೇಕಡಾ 6.25 ಆಗಿದೆ. ಈವರೆಗೆ ರೆಪೊ ದರ ಶೇಕಡಾ 5.90ರಷ್ಟು ಇತ್ತು. ಪರಿಷ್ಕೃತ ರೆಪೊ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ. 

ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.

ಜಾಗತಿಕ ಆರ್ಥಿಕತೆಯು ಇನ್ನೂ ಅನಿಶ್ಚಿತತೆಯಿಂದ ಕೂಡಿದೆ. ಐಎಂಎಫ್ ಪ್ರಕಾರ ಮೂರನೇ ಒಂದು ಭಾಗದಷ್ಟು ಆರ್ಥಿಕತೆಗಳು ಈ ವರ್ಷ ಅಥವಾ ಮುಂದಿನ ವರ್ಷ ಸಂಕುಚಿತಗೊಳ್ಳುತ್ತವೆ. ಹಣದುಬ್ಬರವು ಇತರ ದೇಶಗಳಲ್ಲಿ ಹೆಚ್ಚಾಗಿದ್ದರೂ ಭಾರತದಲ್ಲಿ ನಿಯಂತ್ರಣ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಗ್ರಾಹಕರ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 6.7ರಷ್ಟಿತ್ತು. ಸತತ 11 ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಸಹನೆಯ ಮಟ್ಟವಾದ ಶೇಕಡಾ 6ಕ್ಕಿಂತ ಮೇಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇಕಡಾ 6.7ರಷ್ಟು ಇರಲಿದೆ ಎಂದು ದಾಸ್ ತಿಳಿಸಿದ್ದಾರೆ.