ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ – ದಂಪತಿ ಅರೆಸ್ಟ್…

54
firstsuddi

ಮೈಸೂರು : ನಗರದ ಸಾತಗಳ್ಳಿ ಬಸ್ ಡಿಪೋನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಸಿದ ಮಹಿಳೆ ಹಾಗೂ ಆಕೆ ಪತಿ ಇಬ್ಬರು ಈಗ ಜೈಲು ಸೇರಿದ್ದಾರೆ. ಜೊತೆಗೆ ರೌಡಿಶೀಟರ್ ಕೇಸ್ ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಶಫೀ ಅಹಮದ್ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಸ್ಥಳವನ್ನ 12 ವರ್ಷಗಳ ಅವಧಿಗೆ ಪರವಾನಗಿ ನೀಡಿ ಕರಾರು ಒಪ್ಪಂದ ಮಾಡಿಕೊಂಡಿದ್ದ. ಬಾಡಿಗೆ ಪಡೆದ ಮಳಿಗೆಗಳನ್ನ 6 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದ. ಆದರೆ ಶಫಿ 1 ಕೋಟಿ 80 ಲಕ್ಷ ರೂ. ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದ್ದ. ಶಫಿ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ನೀಡಿದ್ದರು. ಇದರಿಂದ ಶಫಿ ಹಾಗೂ ಆತನ ಪತ್ನಿ ಸಯ್ಯದ್ ಮೈಬುನಿಸಾ ಆಕ್ರೋಶಗೊಂಡು ಮಚ್ಚು ಹಿಡಿದು ಡಿಪೋಗೆ ಬಂದಿದ್ದರು.

ಅಧಿಕಾರಿಗಳ ಮುಂದೆ ಶಫಿ ಹಾಗೂ ಪತ್ನಿ ರಂಪಾಟ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿದ್ದು, ದಂಪತಿ ಅಧಿಕಾರಿಗೆ ಬೆದರಿಕೆ ಹಾಕಿದ್ದರು. ಘಟನೆಗೆ ಸಂಬಂಧಿಸಿ ದಂಪತಿ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ದಂಪತಿ ತಲೆ ಮರೆಸಿಕೊಂಡಿದ್ದರು. ಇದೀಗ ಘಟನೆ ನಡೆದು ಐದು ದಿನ ಬಳಿಕ ಈ ದಂಪತಿಯನ್ನು ಮೈಸೂರು ಪೊಲೀಸರು ಕೊಡಗಿನ ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ.