ಸುರತ್ಕಲ್ ಟೋಲ್ ಗೇಟ್ ತೆರವು ಆಗ್ರಹಿಸಿ ಪ್ರತಿಭಟನೆ ; ಹೋರಾಟಗಾರರು ಪೊಲೀಸ್ ವಶಕ್ಕೆ…

90
firstsuddi

ಮಂಗಳೂರು : ನಗರದ ಹೊರವಲಯದ ಸುರತ್ಕಲ್ ಟೋಲ್ ಗೇಟ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟೋಲ್ ವಿರೋಧಿ ಹೋರಾಟಗಾರರು ಇಂದು ಟೋಲ್‌ ಗೇಟ್ ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಲವು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

60 ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ, ಇಲ್ಲಿ ಒಟ್ಟು ಮೂರು ಟೋಲ್ ಗೇಟ್ ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ಹೀಗಾಗಿ ಹೋರಾಟಗಾರರೇ ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್ ಅನ್ನು ಕಿತ್ತೆಸೆಯಲು ಮುಂದಾಗಿದ್ದಾರೆ.

ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಪ್ರತಿಭಟನಾಕಾರರು ಅಧಿಕಾರಿಗಳಿಗೆ ನಿನ್ನೆಯವರೆಗೂ ಗಡುವು ನೀಡಿದ್ದರು. ಪ್ರತಿಭಟನೆ ಶಾಂತಿಯುತವಾಗಿ ಆರಂಭವಾದರೂ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಸುಮಾರು 500ಕ್ಕೂ ಹೆಚ್ಚು ಪೊಲೀಸರು ಇದ್ದರೂ ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದ ಹೋರಾಟಗಾರರನ್ನು ತಡೆಯಲು ಸಾಧ್ಯವಾಗಿಲ್ಲ. ನೂರಾರು ಹೋರಾಟಗಾರರು ನುಗ್ಗಿ ಟೋಲ್ ಗೇಟ್ ಧ್ವಂಸಕ್ಕೆ ಮುಂದಾದರು. ಆದರೆ ಪೊಲೀಸರು ತಕ್ಷಣವೇ ಎಲ್ಲರನ್ನು ಬಂಧಿಸಿದ್ದಾರೆ.

ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಈ ಟೋಲ್ ಗೇಟ್ ನ್ನು ತೆಗೆಯುತ್ತೇವೆ ಎಂದು ಹೇಳಿ 6 ವರ್ಷವಾದ್ರೂ ಇನ್ನೂ ಕಾರ್ಯಾಚರಿಸುತ್ತಿದೆ. ಹೀಗಾಗಿ ಈ ಟೋಲ್ ಗೇಟ್ ಅಕ್ರಮವಾಗಿದೆ. ಅನಧಿಕೃತ ಟೋಲ್ ಕೇಂದ್ರ ಮುಚ್ಚುವಂತೆ ಹೋರಾಟ, ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.