ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಗೃಹಿಣಿ.

58
firstsuddi

ಮೈಸೂರು : ಗೃಹಿಣಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮದ ಕಪಿಲಾದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ(38) ಮೃತ ಗೃಹಿಣಿ. ಕವಿತಾ ಮೈಸೂರು ತಾಲೂಕಿನ ದೂರ ಗ್ರಾಮದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಡಿ.ಬಿ. ನಾಗರಾಜ್ ಅವರ ಪುತ್ರಿಯಾಗಿದ್ದರು.

ಕವಿತಾ, ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆಗೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮಕ್ಕೆ ಪೂಜೆಗೆ ತೆರಳಿದ್ದರು. ದೇವಾಲಯದ ಪ್ರವೇಶಕ್ಕೂ ಮುನ್ನ ಕಪಿಲಾ ನದಿಯಲ್ಲಿ ಕಾಲು ತೊಳೆಯಲು ಹೋಗಿದ್ದರು. ಕಾಲು ತೊಳೆದು ಬಳಿಕ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಕವಿತಾರನ್ನ ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದೇಹವನ್ನು ನದಿಯಿಂದ ಹೊರತೆಗೆದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.