ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಮಂತ್ರರೂಪಕ್ಕೆ ಪರಿವರ್ತಿಸಿ ಪಠಿಸುವ ಮೂಲಕ ಹಿರೇಮಗಳೂರಿನ ದೇವಾಲಯದಲ್ಲಿ ಪೂಜೆ…

409
firstsuddi

ಚಿಕ್ಕಮಗಳೂರು: ಕನ್ನಡದಲ್ಲಿ ಪೂಜೆ, ಉತ್ಸವ ಮೂರ್ತಿಯ ಅಡ್ಡೆಯನ್ನು ಮಹಿಳೆಯರು ಹೊರುವುದು, ರಾಮನಾಮ ಲಿಪಿ ಯಜ್ಞದಂತಹ ಆಚರಣೆಗಳಿಂದ ನಾಡಿನ ಗಮನ ಸೆಳೆದಿರುವ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಮಂತ್ರರೂಪಕ್ಕೆ ಪರಿವರ್ತಿಸಿ ಪಠಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆಯಿತು.
ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದಪಠಣ, ಅಭಿಷೇಕ, ವಿಶೇಷ ಪೂಜೆ ಜರುಗಿದ ನಂತರ ಬೆಳಿಗ್ಗೆ 5 ಗಂಟೆಗೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಮುಚ್ಚುಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ ಕವನವನ್ನು ನೆರೆದಿದ್ದ ಸಹಸ್ರಾರು ಭಕ್ತರು ಸಾಮೂಹಿವಾಗಿ ಮಂತ್ರ ರೂಪದಲ್ಲಿ ಪಠಿಸಿದರು.

firstsuddi

 ನಗರ ಹೊರವಲಯದ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ವೈಕುಂಠ ಏಕಾದಶಿ ಉತ್ಸವ ಸಹಸ್ರಾರು ಭಕ್ತರ ನಡುವೆ ಮಂಗಳವಾರ ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದಪಠಣ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು.
ಮಹಾಮಂಗಳಾರತಿ ನಂತರ ಬೆಳಿಗ್ಗೆ 5.30 ಕ್ಕೆ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಹೊರತಂದು ದೇವಾಲಯದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು, ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಿದ ಬಳಿಕ ವೈಕುಂಠ ದ್ವಾರದ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ವರ್ಷಕ್ಕೊಮ್ಮೆ ಮಾತ್ರ ವೈಕುಂಠ ದ್ವಾರದ ಬಾಗಿಲುಗಳನ್ನು ತೆರೆಯುವ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಮೈಕೊರೆವ ಮಾಗಿ ಚಳಿಯನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಭಕ್ತರು ವೈಕುಂಠ ದ್ವಾರವನ್ನು ತೆರೆಯುತ್ತಿದ್ದಂತೆ ಉತ್ಸವ ಮೂರ್ತಿಯೊಂದಿಗೆ ದ್ವಾರವನ್ನು ಪ್ರವೇಶಿಸಿ ಧನ್ಯತಾ ಭಾವ ಮೆರೆದರು.
ಇದೇ ವೇಳೆ ಭಕ್ತರಿಂದ ಭಜನೆ, ಭಗವದ್ಗೀತೆಯ ಪಠಣ, ನಾಮ ಸಂಕೀರ್ತನೆ ಜರುಗಿತು, ಸಹಸ್ರಾರು ಭಕ್ತರು ರಾಮನಾಮ ಲಿಪಿಯನ್ನು ಬರೆದು ರಾಮನಾಮ ಲಿಪಿ ಮಂಟಪಕ್ಕೆ ಸಮರ್ಪಿಸಿದರು.
ದೇವಾಲಯದ ವತಿಯಿಂದ ಭಕ್ತರಿಗೆ ಪೊಂಗಲ್ ಪ್ರಸಾದ ವಿತರಿಸಲಾಯಿತು, ಬೆಳಗಿನಿಂದ ರಾತ್ರಿಯವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವೈಕುಂಠ ದ್ವಾರವನ್ನು ಪ್ರವೇಶಿಸಿ ಸಂಭ್ರಮಿಸಿದರು.