ಹಾದಿ ತಪ್ಪಿದ ಹದಿಹರೆಯ…

999
  • ರಾಘವೇಂದ್ರ ಕೆಸವಳಲು

ಫಸ್ಟ್ ಸುದ್ದಿ : ಮೊನ್ನೆ ತಾನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ನಡುವಯಸ್ಸಿನ ಶಿಕ್ಷಕರೊಬ್ಬರ ಲೈಂಗಿಕ ಅಸಭ್ಯ ವರ್ತನೆಯ ವೀಡಿಯೋ ಧಿಗ್‍ಭ್ರಮೆ ಮೂಡಿಸಿತು. ನೈತಿಕ ಮೌಲ್ಯಗಳನ್ನು ಕಲಿಸುವ ಗುರುಗಳೇ ತಮ್ಮ ಮಕ್ಕಳಂತಿರುವ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಶೋಷಿಸಿದರೆ ಇದು ನಮ್ಮ ನೈತಿಕತೆಯ ಅಧಃಪತನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒಂದೆಡೆ ಬಾಲಕರು ಹೆಚ್ಚುತ್ತಿರುವ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದರೆ, ಬಾಲಕಿಯರು ಹದಿಹರೆಯದ ವಾಂಛೆ ಈಡಾಗಿ ಭವಿಷ್ಯದ ಸುಂದರ ಬದುಕನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ.

ಪ್ರೌಢಾವಸ್ತೆಯಲ್ಲಿರುವ ಬಾಲಕ ಬಾಲಕಿಯರಿಗೆ ಅವರ ಮಾನಸಿಕ ಹಾಗೂ ದೈಹಿಕ ಬದಲಾವಣೆಯ ಬಗ್ಗೆ ಸಾಕಷ್ಟು ಕುತೂಹಲಗಳಿರುತ್ತದೆ. ಈ ಸಮಯದಲ್ಲಿ ಅವರು ಕಂಗೆಡಬಾರದು ಹಾಗೂ ತಪ್ಪು ಹಾದಿ ಹಿಡಿಯಬಾರದು ಎನ್ನುವ ಉದ್ದೇಶದಿಂದಲೇ ಪಠ್ಯಪುಸ್ತಕ ಮಂಡಳಿಯವರು ಸರ್ಕಾರದ ಅಂಗೀಕಾರದೊಂದಿಗೆ ಹದಿಹರೆಯ ಹಾಗೂ ಆ ಸಮಯದಲ್ಲಿ ದೈಹಿಕ-ಮಾನಸಿಕ ಬದಲಾವಣೆಯ ಬಗ್ಗೆ ಅರಿವು ಮೂಡಿಸಲು ಪಠ್ಯದಲ್ಲಿ ಸಾಕಷ್ಟು ವಿಷಯಗಳನ್ನು ಸೇರಿಸಿದ್ದಾರೆ. ಬಹುತೇಕ ಜವಾಬ್ದಾರಿಯುತ ಶಿಕ್ಷಕರು ವಿದ್ಯಾರ್ಥಿಗಳನ್ನು ಗೆಳೆಯರಂತೆ ಆದರಿಸಿ ಇಂತಹ ಸೂಕ್ಷ್ಮ ವಿಚಾರಗಳನ್ನು ಮುಕ್ತವಾಗಿ ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಹದಿಹರೆಯದ ಬಾಲಕ ಬಾಲಕಿಯರು ತಮ್ಮ ಕುತೂಹಲ ಪ್ರಶ್ನೆಗಳಿಗೆ ಈ ಮೂಲಕ ಉತ್ತರ ಕಂಡುಕೊಳ್ಳುವಂತೆ ಮಾಡಿದ್ದಾರೆ.
ಇವರಷ್ಟೇ ಜವಾಬ್ದಾರಿಯಿಂದ ಪ್ರತಿ ತಾಯಂದಿರು ಕೂಡಾ ತಮ್ಮ ಹೆಣ್ಣು ಮಕ್ಕಳಿಗೆ puberty ಸಮಯದಲ್ಲಾಗುವ ಬದಲಾವಣೆಗಳು ಹಾಗೂ ಮುಂಜಾಗ್ರತೆಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಬೇಕು. ಒಮ್ಮೆ ಹೆಣ್ಣು ಮಗುವಿಗೆ good and bad touch ಗಳ ಬಗ್ಗೆ ಅರಿವು ಮೂಡಿತೆಂದರೆ ಮತ್ತೆಂದೂ ಅದು  ತಿಳಿದು ಲೈಂಗಿಕ ಶೋಷಣೆಗೆ ಒಳಗಾಗುವುದಿಲ್ಲ.


ಮೊನ್ನೆ ತಾನೆ ಸರ್ಕಾರಿ ಆಸ್ಪತ್ರೆಯ ವೈದ್ಯ ಗೆಳೆಯರೊಬ್ಬರು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೂ ಕೂಡಾ ಜಾಗೃತಿ ಮೂಡಿಸುವ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. puberty, S.T.D(sexually transmitted diseases) ಇವುಗಳ ಬಗ್ಗೆ ಆರೋಗ್ಯ ಇಲಾಖೆಯ ವೈದ್ಯರು ಪ್ರತಿ ಶಾಲೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕೂಡಾ ತಿಳಿಸಿದರು. ಅರಿವಿರದ ಹದಿಹರೆಯ ಹಲವಾರು ಬಾರಿ ಮಕ್ಕಳನ್ನು ತಪ್ಪು ದಾರಿಗೆಳೆಯುತ್ತದೆ. ಆದರೆ ಅರಿವಿನ ದಾರಿ ದೀಪವಾದ ಗುರುಗಳು, ಹಿತೈಶಿಗಳು, ಬಂಧುಗಳು ಮಕ್ಕಳನ್ನು ಈ ನಿಟ್ಟಿನಲ್ಲಿ ಶೋಷಿಸಿದರೆ ಅದು ಆಕ್ಷಮ್ಯ ಅಪರಾಧ. ಆದ್ದರಿಂದ ಹದಿಹರೆಯದ ವಯಸ್ಸಿನ ಬಾಲಕ ಬಾಲಕಿಯರು ವ್ಯರ್ಥ ಕುತೂಹಲಕ್ಕೋಸ್ಕರ ತಮ್ಮ ಅಮೂಲ್ಯ ಸಮಯ ಮತ್ತು ಜೀವನವನ್ನು ವ್ಯರ್ಥವಾಗಿಸದೆ ಭವಿಷ್ಯ ರೂಪಿಸಿಕೊಳ್ಳಲು ಸಮಾಜದಲ್ಲಿನ ಸರ್ವರದೂ ಸಮಪಾಲಿದೆ.

FIRSTSUDDI