ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗ…

31
firstsuddi

ಕ್ಯಾನ್ಬೆರಾ : ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆ್ಯರೋನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕನ್ನು ಅಂತ್ಯಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಫಿಂಚ್, ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. 2024ರ ಟಿ20 ವಿಶ್ವಕಪ್ ವರೆಗೆ ನಾನು ಆಡುವುದಿಲ್ಲ ಎಂಬುದನ್ನು ಅರಿತುಕೊಂಡು ಕೆಳಗಿಳಿಯಲು ನಿರ್ಧರಿಸಿದ್ದೇನೆ. ತಂಡಕ್ಕೆ ಇನ್ನಷ್ಟು ಕಾಲಾವಕಾಶ ನೀಡಲು ಇದು ಸರಿಯಾದ ಸಮಯವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ 2011ರಲ್ಲಿ ನಡೆದ ಟಿ20 ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಫಿಂಚ್ ಇಲ್ಲಿಯವರೆಗೆ 254 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 19 ಶತಕಗಳೊಂದಿಗೆ 8804 ರನ್ ಗಳನ್ನು ಸಿಡಿಸಿದ್ದಾರೆ. ಇಲ್ಲಿಯವರೆಗೂ 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಫಿಂಚ್ ಟಿ20 ನಾಯಕತ್ವ ಮುಂದುವರಿಸಿದ್ದರು. 2013ರಲ್ಲಿ ಇಂಗ್ಲೆಡ್ ವಿರುದ್ಧ ಆ್ಯರೋನ್ ಫಿಂಚ್ ಟಿ20ಯಲ್ಲಿ 63 ಎಸೆತದಲ್ಲಿ 156 ರನ್ ಗಳಿಸಿದ್ದರು. ಇದು ಪುರುಷರ ಟಿ20 ಪಂದ್ಯದಲ್ಲಿ ಆಟಗಾರನೊಬ್ಬ ಸಿಡಿಸಿದ 3ನೇ ಅತಿ ಹೆಚ್ಚಿನ ಸ್ಕೋರ್ ಎಂದು ದಾಖಲಾಗಿದೆ.