ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ವರ್ಷ ಏಪ್ರಿಲ್ 4 ರಿಂದ 14ರವರೆಗೆ ದ್ರೌಪತಮ್ಮ ಶಕ್ತ್ಯೋತ್ಸವ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ ಕರಗವನ್ನು ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಸತತವಾಗಿ ಬೆಂಗಳೂರು ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಹೊರುತ್ತಿದ್ದಾರೆ. ಈ ವರ್ಷ ದ್ರೌಪದಿ ದೇವಿ ಕರಗ ಹೊತ್ತರೆ 15ನೇ ಬಾರಿ ಕರಗ ಹೊತ್ತಂತೆ ಆಗುತ್ತದೆ. ಈ ವರ್ಷ ಅವರು ಕೊನೆಯ ಬಾರಿ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಸಂಬಂಧ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಜ್ಞಾನೇಂದ್ರ ಸ್ವಾಮಿಯನ್ನು ಮತ್ತೆ ಕರಗ ಹೊರಲು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನವೀನ್, ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್, ಖಜಾಂಚಿ ಜಿ.ಬಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಮರನಾರಾಯಣ ಸಭೆಯಲ್ಲಿ ಭಾಗವಹಿಸಿದ್ದರು.










