ಮನುಕುಲದ ಅಸ್ಥಿತ್ವಕ್ಕೆ ಪರಿಸರ ಸಂರಕ್ಷಣೆಯ ಅಗತ್ಯ…

533
firstsuddi
  • ರಾಘವೇಂದ್ರ ಕೆಸವಳಲು

ಫಸ್ಟ್ ಸುದ್ದಿ : ಮತ್ತೊಮ್ಮೆ ವಿಶ್ವ ಪರಿಸರ ದಿನ ಆಚರಿಸಿದ್ದೇವೆ. ಪರಿಸರದ ಮಹತ್ವ, ಅದನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ, ಭವಿಷ್ಯದ ಪೀಳಿಗೆಗಾಗಿ ಪರಿಸರ ರಕ್ಷಣೆ ಮಾಡುವುದು ಹೀಗೆ ಹಲವು ಚಿಂತನೆಗಳು ನಡೆದಿವೆ. ಆದರೆ ಔಪಾಚಾರಿಕಗೊಂಡಿರುವ ಆಚರಣೆಯಿಂದ ಅದರ ಮಹತ್ವ ತನ್ನಷ್ಟಕ್ಕೇ ಕಡಿಮೆಯಾಗುತ್ತಾ ಸಾಗಿದೆ. ಪರಿಸರ ದಿನ ಆಚರಿಸುವಲ್ಲಿ ಇಂತಹ ಧೋರಣೆ ಸಲ್ಲದು.

   ಪರಿಸರ ನಾಶದ ಕಾರಣಕ್ಕೆ ಈ ಜಗತ್ತು ತೆರುತ್ತಿರುವ ಬೆಲೆ, ಪರಿಸರವಾದಿಗಳನ್ನೂ ದಾಟಿ ಸಾಮಾನ್ಯ ಮನುಷ್ಯರಿಗೆ ಅದರ ಬಿಸಿ ತಟ್ಟಲಾರಂಭಿಸಿದೆ. ಪ್ರತಿಯೊಬ್ಬರಿಗೂ ಈ ಹೊತ್ತು ಕಾಡಿನ ಮಹತ್ವ, ಸುತ್ತಲಿನ ಪರಿಸರ ರಕ್ಷಿಸಿಕೊಳ್ಳುವುದರ ಪ್ರಾಮುಖ್ಯತೆ ಮನವರಿಕೆ ಆಗುತ್ತಿದೆ. ಆದರೆ ನಿರೀಕ್ಷಿತ ಮಟ್ಟಕ್ಕೆ ಆ ಉದ್ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿಲ್ಲ. ಪರಿಸರ ರಕ್ಷಣೆ ಎನ್ನುವುದು ಯಾರೋ ಒಬ್ಬರ ಪರವಾಗಿ ಇನ್ಯಾರೋ ಹೊಣೆಗಾರಿಕೆ ಹೊತ್ತು ನಿರ್ವಹಿಸಬೇಕಾದ ಕೆಲಸ ಅಲ್ಲ. ಅದು ಪ್ರತಿಯೊಬ್ಬರಿಗಾಗಿ ಪ್ರತಿಯೊಬ್ಬರೂ ಮಾಡಬೇಕಾದ ಕರ್ತವ್ಯ ಎಂಬುವುದನ್ನು ಅರಿಯಬೇಕಾದ ಅನಿವಾರ್ಯತೆ ಇದೆ.

    ಜಾಗತಿಕ ತಾಪಮಾನದ ಬಿಸಿ ಎಲ್ಲರಿಗೂ ತಾಕಿದೆ. ದೈನಂದಿನ ಜನಜೀವನ ಉಸಿರು ಕಟ್ಟುವಂತಾಗಿದೆ. ಅಂತರ್ಜಲ ಪಾತಾಳಕ್ಕೆ ಕುಸಿದು ಜೀವಸಂಕುಲ ನರಳುತ್ತಿದೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಗಿಡಮರ ನೆಡಬೇಕು, ಸಂರಕ್ಷಿಸಬೇಕು ಎನ್ನುವ ಪ್ರಾಥಮಿಕ ಅರಿವನ್ನು ಪರಿಸರ ದಿನದ ಚಟುವಟಿಕೆಗಳು ಜನರಲ್ಲಿ ಮೂಡಿಸಬೇಕು.

    ಈಗಲೂ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಭರವಸೆ ಇಡಬಹುದಾದ ಬಹುದೊಡ್ಡ ಬದ್ಧತೆಯುಳ್ಳ ಸಮುದಾಯ ಎಂದರೆ ರೈತಾಪಿ ಸಮುದಾಯ. ಕೃಷಿ ಜೀವನದ ಅವಿಭಾಜ್ಯ ಅಂಗವೇ ಆಗಿರುವ ರೈತರಿಗೆ ಗಿಡಮರಗಳ ಪ್ರಾಮುಖ್ಯತೆಯ ಅರಿವಿದೆ. ಆದರೆ ವಿವಿಧ ಕಾರಣಗಳಿಗೆ ಕೃಷಿ ಭೂಮಿಯಲ್ಲಿನ ಮರಗಳ ಪ್ರಮಾಣ ಕಡಿಮೆಯಾಗಿರುವುದಂತೂ ನಿಜ. ಆದರೆ ಮರಕೃಷಿಯಿಂದ ಅಂತರ್ಜಲ ಪುನಃಶ್ಚೇತನದ ಜೊತೆಗೆ ಸುಂದರ ಮಾಲಿನ್ಯರಹಿತ ಪರಿಸರ ನಿರ್ಮಾಣ ಸಾಧ್ಯ. ಭವಿಷ್ಯದ ಆರ್ಥಿಕ ಭದ್ರ ಬುನಾದಿಗಾಗಿ ಕೈಗೊಳ್ಳುವ ಯಾವುದೇ ಚಟುವಟಿಕೆಯಿಂದ ಪರಿಸರ ನಾಶವಾದರೂ ಮುಂದೆ ಮನುಕುಲದ ಅಸ್ತಿತ್ವ ಕಷ್ಟಸಾಧ್ಯ. ಪ್ರಕೃತಿ ತನ್ನದೇ ರೀತಿಯಲ್ಲಿ ರೌದ್ರ ರೂಪಗಳನ್ನು ತಾಳಿ ಕ್ಷಣಮಾತ್ರದಲ್ಲಿ ಎಲ್ಲವನ್ನೂ ನಾಶಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ಪರಿಸರ ದಿನಾಚರಣೆ ಒಂದು ದಿನದ ಆಚರಣೆಯಾಗದೇ ಸಂಘ ಸಂಸ್ಥೆಗಳ ಕರ್ತವ್ಯವಾಗದೇ ಪ್ರತಿ ನಾಗರೀಕನ ಅನುದಿನದ ಆದ್ಯತೆ ಆಗಬೇಕು ಆಗಷ್ಟೆ ಭವಿಷ್ಯದ ಪೀಳಿಗೆಯ ಉನ್ನತಿ ಸಾಧ್ಯ.