ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ತಳಿ ಪತ್ತೆ ; ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ…

34
firstsuddi

ಬೆಂಗಳೂರು : ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದ್ದು, ಇದೀಗ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ದೀಪಾವಳಿ, ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಈ ವೇಳೆ ರೋಗ ಹರಡುವ ಭೀತಿ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಇರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ.

ಏರ್ ಕಂಡೀಷನ್ ಇರುವ ಜಾಗ, ಒಳಾಂಗಣ ಪ್ರದೇಶ, ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವವರು ಕಡ್ಡಾಯವಾಗಿ ಪಡೆಯಬೇಕು. ಉಳಿದಂತಹ ಸಿಎಬಿ ನಿಯಮವನ್ನು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲನೆ ಮಾಡಬೇಕು.

ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆಯಲು ಬಾಕಿ ಇರುವವರು ಕೂಡಲೇ ಪಡೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶೀಘ್ರವೇ ಲಸಿಕೆಯನ್ನು ಪಡೆಯಬೇಕು. ಜೀವ ನಿರೋಧಕ ಕಡಿಮೆ ಇರುವವರು, ಡಯಾಲಿಸಿಸಿ ಮಾಡಿಸಿಕೊಳ್ಳುವವರು ಮತ್ತು ಕ್ಯಾನ್ಸರ್ ನಿರೋಧಕ ಔಷಧಿಗಳನ್ನು ಸೇವಿಸುತ್ತಿರುವವರು ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆ ನಂತರ ಆದ್ಯತೆಯ ಮೇಲೆ ಕೋವಿಡ್-19 ಲಸಿಕೆಯನ್ನು ಪಡೆದುಕೊಳ್ಳಬೇಕು.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಡಚಿದ ಮೊಣಕೈ ಒಳಗೆ ಕೆಮ್ಮುವುದು ಹಾಗೂ ಸೀನುವುದು. ಕರವಸ್ತ್ರ/ಟಿಶ್ಯೂ ಪೇಪರ್ ನ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಗನ್ನು ಶುಚಿಗೊಳಿಸದಿರುವುದು ಹಾಗೂ ಉಗುಳದಿರುವುದು. ಕೈಗಳನ್ನು ಸೋಪ್ ನಿಂದ ತೊಳೆಯುವುದು ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿದವರ ಸಂಪರ್ಕದಿಂದ ದೂರವಿರುವ ಕ್ರಮಗಳನ್ನು ಪಾಲಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.