ಕಬ್ಬಿನ ಬಾಕಿ ಹಣ ಪಾವತಿ ಮಾಡದಿದ್ದರೆ ಕ್ರಮ : ಸಕ್ಕರೆ ಕಾರ್ಖಾನೆಗಳಿಗೆ ಮುನೇನಕೊಪ್ಪ ಎಚ್ಚರಿಕೆ…

67
firstsuddi

ಬೆಂಗಳೂರು : ರಾಜ್ಯದ ಸಕ್ಕರೆ ಕಾರ್ಖಾನೆಗಳು ಈ ತಿಂಗಳ ಅಂತ್ಯದೊಳಗೆ ರೈತರ ಕಬ್ಬಿನ ಹಣ ಬಾಕಿ ಪಾವತಿಯನ್ನು ಮಾಡಬೇಕು. ಈ ತಿಂಗಳೊಳಗೆ ರೈತರ 100% ಬಾಕಿ ಪಾವತಿ ಬಗ್ಗೆ ಕಾರ್ಖಾನೆಗಳು ಭರವಸೆ ಕೊಟ್ಟಿವೆ. ಮಾತು ತಪ್ಪಿದರೆ, ರಾಜಕೀಯ ಪಕ್ಷದ ಮಾಲೀಕರು ಎಂದು ನೋಡುವುದಿಲ್ಲ. ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಕಾಸ ಸೌಧದಲ್ಲಿ ಇಂದು ಕಾರ್ಖಾನೆಯ ಮಾಲೀಕರು ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಚರ್ಚಿಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿ ಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇಷ್ಟಾದರೂ ಕೆಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿ ಮಾಡಿಲ್ಲ. ಕಬ್ಬಿನ ಹಣ ಬಾಕಿ ಪಾವತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ರೈತರ ಬಾಕಿ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಿಫಲವಾದರೆ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದರು.

2021-22 ರಲ್ಲಿ ರೈತರಿಗೆ 19,626 ಕೋಟಿ ರೂ ಹಣ ರೈತರಿಗೆ ಸಂದಾಯ ಆಗಬೇಕಿದೆ. ಈ ಪೈಕಿ 18,224 ಕೋಟಿ ರೂ ಸಂದಾಯ ಮಾಡಲಾಗಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು 1435 ಕೋಟಿ ರೂ ಬಾಕಿ ಬಿಲ್ ಕೊಡಬೇಕಿದೆ. ಈ ಪೈಕಿ ಇವತ್ತಿನ ಸಭೆಯಲ್ಲಿ ತಕ್ಷಣ 200 ಕೋಟಿ ಬಾಕಿ ಪಾವತಿಗೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಮಂಡ್ಯ ಮೈ ಶುಗರ್ ಗೆ 50 ಕೋಟಿ ಬಿಡುಗಡೆ ಮಾಡಲಾಗುವುದು. ಇದನ್ನು ಸರ್ಕಾರದ ವತಿಯಿಂದಲೇ ನಡೆಸುತ್ತೇವೆ. ಮೈಸೂರಿನ ಶ್ರೀರಾಮ್, ಬಾಗಲಕೋಟೆಯ ಕಾರ್ಖಾನೆಗಳನ್ನು ಸರ್ಕಾರದಿಂದಲೇ ನಿರ್ವಹಣೆ ಮಾಡಲಾಗುವುದು. ಪಾಂಡವಪುರ ಕಾರ್ಖಾನೆಯ ಪುನಶ್ಚೇತನಕ್ಕೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ಪಾಲು ನೀಡುವ ಬಗ್ಗೆ ಸಕ್ಕರೆ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಮೈಶುಗರ್ ಕಾರ್ಖಾನೆಗೆ 528. ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.