ಕಲಬುರಗಿ : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಪಿಡಬ್ಲೂಡಿ ಜೆ.ಇ. ಶಾಂತಗೌಡ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದರು.
ಎಸಿಬಿ ದಾಳಿ ವಿಷಯ ತಿಳಿದ ಶಾಂತಗೌಡ ಹತ್ತು ನಿಮಿಷ ಮುಂಚೆ ಹಣವನ್ನು ಪೈಪ್ ನಲ್ಲಿ ಬಿಸಾಕಿದ್ದರು. ಬಾಗಿಲು ತೆರೆಯೋದಕ್ಕೆ ಸತಾಯಿಸುವ ವೇಳೆ ಶಾಂತಗೌಡ ಹಣ ಬಿಸಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ಲಂಬರ್ ರನ್ನು ಕರೆಸಿ ಪೈಪ್ ಕಟ್ ಮಾಡಿಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. ಈಗಾಗಲೇ ಮನೆಯಲ್ಲಿ 40 ಲಕ್ಷಕ್ಕಿಂತ ಅಧಿಕ ನಗದು, ಚಿನ್ನಾಭರಣ ಪತ್ತೆಯಾಗಿದೆ.
ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದಾರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದ್ದು, ಕಲಬುರಗಿ ಗುಬ್ಬಿ ಕಾಲೋನಿಯಲ್ಲಿ ಮೂರಂತಸ್ತಿನ ಭವ್ಯ ಬಂಗಲೆ, ವಿವಿ ರಸ್ತೆಯಲ್ಲಿ ಎರಡು ನಿವೇಶನ, ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು, ಹಂಗರಗಾ ಗ್ರಾಮದಲ್ಲಿ ಮೂರು ಮನೆಗಳು ಸೇರಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು, ಜೆ.ಇ. ಶಾಂತಗೌಡ ಬಿರಾದಾರ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.










