ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ : ಸಿದ್ದರಾಮಯ್ಯ.

115
firstsuddi

ಮೈಸೂರು : ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಆರ್.ಆರ್. ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುತ್ತಾರೆ. ಕಳೆದ ಬಾರಿ ಶಿರಾ ಕ್ಷೇತ್ರದಲ್ಲಿ ಅಪಪ್ರಚಾರವಾಗಿದ್ದರಿಂದ ನಮ್ಮ ಅಭ್ಯರ್ಥಿ ಸೋತರು. ಈ ಬಾರಿ ಸರ್ಕಾರದ ದುರಾಡಳಿತವನ್ನು ಗಮನಿಸಿ ನಮ್ಮ ಕಡೆ ಹೆಚ್ಚು ಒಲವು ಇದೆ. ಆದ್ದರಿಂದ ಶಿರಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಾಗಿದ್ದಾರೆ. ಬಿಜೆಪಿ ಅವರು ಹಣದಿಂದ ಚುನಾವಣೆ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತದೆ ಎಂದು ನಾನು ಹೇಳುವುದಿಲ್ಲ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ. ಇದು ಅವರ ಪಕ್ಷದ ಮುಖಂಡರಿಗೂ ತಿಳಿದಿದೆ ಎಂದರು.
ಇದೇ ವೇಳೆ ಅಮೆರಿಕಾ ಚುನಾವಣೆ ಕುರಿತು ಪ್ರತಿಕ್ರಯಿಸಿದ ಅವರು, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರ ಹೆಸರು ಹೇಳಿಕೊಂಡು ಮತ ಕೇಳಿದ್ದಾರೆ. ಅಮೆರಿಕ ಜನತೆ ಮೋದಿ ಅವರ ಮುಖ ನೋಡಿ ವೋಟ್ ಹಾಕುತ್ತಾರ? NRI ಗಳು ಮೋದಿ ಮುಖ ನೋಡಿ ವೋಟ್ ಹಾಕುವುದಿಲ್ಲ. ಮೋದಿ ಅವರ ವಿರುದ್ಧ ಭಾರತದಲ್ಲೇ ಜನಾಭಿಪ್ರಾಯ ಆರಂಭವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೋದಿ ಅವರು ಹಾಳುಮಾಡಿದ್ದಾರೆ. ಮೋದಿ ಅವರ ಆಡಳಿತದಲ್ಲಿ ಜಿಡಿಪಿ ದರ ಪಾತಾಳಕ್ಕೆ ಕುಸಿದಿದೆ. ಮೋದಿ ವಿರುದ್ಧ ಯುವ ಸಮೂಹ ಕೂಡಾ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.