ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಗ್ಗೆ ಸದನ ಸೇರಿದಾಗ ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಎಸ್.ಎಂ.ಕೃಷ್ಣ 1932ರ ಮೇ 1ರಂದು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದರು. ಪದವಿ ಬಳಿಕ ನಂತರ ಟೆಕ್ಸಾಸ್‍ನಲ್ಲಿ ಎಂಸಿಎಲ್ ಪದವಿ, ವಾಷಿಂಗ್ಟನ್ ವಿವಿಯ ಲಾ ಸ್ಕೂಲ್‍ನಿಂದಲೂ ಪದವಿ ಪಡೆದಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 1989, 1999 ಹಾಗೂ 2004ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1968, 1971 ಹಾಗೂ 1980ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. 1972ರಲ್ಲಿ ವಿಧಾನಪರಿಷತ್ ಸದಸ್ಯರಾಗಿ, 1996 ರಿಂದ 1999 ಮತ್ತು 2008ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಸ್ಪೀಕರ್ ಗುಣಗಾನ ಮಾಡಿದರು. ಅಲ್ಲದೆ ಎಸ್.ಎಂ.ಕೃಷ್ಣ ವಿಧಾನಸಭೆಯ ಸಭಾಧ್ಯಕ್ಷರಾಗಿ, ಕೈಗಾರಿಕೆ ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಉಪಮುಖ್ಯಮಂತ್ರಿಯಾಗಿ, ನಂತರ ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಕೇಂದ್ರ ಕೈಗಾರಿಕೆ ರಾಜ್ಯ ಸಚಿವರಾಗಿ, ಹಣಕಾಸು ಖಾತೆಯ ರಾಜ್ಯ ಸಚಿವರಾಗಿ, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅವರು 2008ರಲ್ಲಿ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದರು ಎಂದು ಸ್ಮರಿಸಿದರು. ಎಸ್.ಎಂ.ಕೃಷ್ಣ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಸಂತಾಪ ವ್ಯಕ್ತಪಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಎಸ್.ಎಂ.ಕೃಷ್ಣ ಅವರು ಸಂತಾಪ ಸೂಚನೆ ಮಂಡಿಸಿದರು. ದೂರದೃಷ್ಟಿ ನಾಯಕ, ಶಿಸ್ತುಬದ್ಧ ಜೀವನ, ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಂಡಿದ್ದ ವ್ಯಕ್ತಿ ಇನ್ನಿಲ್ಲವಾಗಿರುವುದು ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂತಾಪ ಸೂಚಿಸಿ, ಒಂದು ನಿಮಿಷ ಮೌನಾಚರಣೆ ಮಾಡಿ ಸದನವನ್ನ ಡಿಸೆಂಬರ್ 12ಕ್ಕೆ ಮುಂದೂಡಲಾಯಿತು.