ಸಾಲ ವಸೂಲಾತಿಗೆ ಬೆಳಗ್ಗೆ 9 ಗಂಟೆ ಮುಂಚೆ, ಸಂಜೆ 6 ಗಂಟೆ ನಂತರ ಕರೆ ಮಾಡುವಂತಿಲ್ಲ: ಡಿಸಿ ಸೂಚನೆ.

32

ಬಳ್ಳಾರಿ: ಜಿಲ್ಲೆಯಲ್ಲಿನ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‍ಬಿಐ ಮಾರ್ಗಸೂಚಿಯ ಅನ್ವಯ ಕಾರ್ಯನಿರ್ವಹಿಸಬೇಕು. ಸಾಲ ವಸೂಲಾತಿ ನೆಪದಲ್ಲಿ ಮಾನಸಿಕವಾಗಿ ನಿಂದಿಸುವುದು, ಅವಾಚ್ಯ ಶಬ್ದ ಬಳಸುವುದು, ಅವಮಾನಿಸುವ ಪ್ರಕರಣಗಳು ಕಂಡುಬದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಖಡಕ್ ಸೂಚನೆ ನೀಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಆಗುತ್ತಿರುವ ಕಿರುಕುಳ ಹಿನ್ನೆಲೆ ಹಾಗೂ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಾಲ ವಸೂಲಾತಿ ನೆಪದಲ್ಲಿ ಯಾವುದೇ ಕಿರುಕುಳ ಪ್ರಕರಣಗಳು ವರದಿಯಾಗಿಲ್ಲ. ಕಂಪನಿಗಳ ಪದಾಧಿಕಾರಿಗಳು ಸಾರ್ವಜನಿಕ ವಲಯದಲ್ಲಿ ಉತ್ತಮ ಭಾಂದವ್ಯ ಇಟ್ಟುಕೊಳ್ಳಬೇಕು. ಕಿರುಕುಳ ಪ್ರಕರಣಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕುರಿತಾಗಿ ಈಗಾಗಲೇ ಸಿಎಂ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಸುಗ್ರಿವಾಜ್ಞೆ ತರುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಯ್ದೆಯು ಜಾರಿಗೆ ಬರಲಿದೆ ಎಂದು ತಿಳಿಸಿದರು. ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ಆರ್‍ಬಿಐ ಮಾರ್ಗಸೂಚಿ ಪಾಲನೆ ಮಾಡಬೇಕು. ಸಾಲ ಮಂಜೂರಾತಿ ಹಾಗೂ ವಸೂಲಾತಿ ನಿಯಮ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ನಿಯಮಬಾಹಿರ ಮಾರ್ಗ ಅನುಸರಿಸಬಾರದು. ಸಾಲ ಮಂಜೂರಾತಿ ಸಂದರ್ಭದಲ್ಲಿ ನೇರವಾಗಿ ಸಾಲ ಪಡೆದವರೊಂದಿಗೇ ವ್ಯವಹರಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದರು. ಸಾಲ ಮಂಜೂರಾತಿ ನಿಯಮಗಳು, ಸಾಲದ ಮೊತ್ತ, ಅವಧಿ, ಬಡ್ಡಿ ದರ, ಹಿಂಪಾವತಿ ಅವಧಿ ಸೇರಿದಂತೆ ಅಗತ್ಯ ಮಾಹಿತಿಗಳನ್ನೊಳಗೊಂಡ ಮಾರ್ಗಸೂಚಿ ಸಾಲ ಪಡೆಯುವವರಿಗೆ ಕಡ್ಡಾಯವಾಗಿ ನೀಡಬೇಕು. ಪಡೆದ ಸಾಲ ವಸೂಲಾತಿ ನೆಪದಲ್ಲಿ ಯಾವುದೇ ಕಾರಣಕ್ಕೂ ಕಿರುಕುಳ ನೀಡುವಂತಿಲ್ಲ ಎಂದು ಇದೇ ವೇಳೆ ಅವರು ತಾಕೀತು ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಮಾತಾನಾಡಿ, ಜಿಲ್ಲೆಯಲ್ಲಿ ಒಟ್ಟು 118 ಮೈಕ್ರೋ ಫೈನಾನ್ಸ್ ಕಂಪನಿಗಳಿದ್ದು, ಅದರಲ್ಲಿ 27 ಕಂಪನಿಗಳು ಮಾತ್ರ ಆರ್‍ಬಿಐ ನಡಿ ಅಧೀಕೃತವಾಗಿ ನೋಂದಾಯಿಸಿಕೊಂಡಿವೆ. ಇನ್ನುಳಿದ 97 ಕಂಪನಿಗಳು ನೋಂದಾಯಿಸಿಕೊಂಡಿಲ್ಲ. ಮುಖ್ಯವಾಗಿ ಸಾಲ ವಸೂಲಾತಿಗೆ ಬೆಳಗ್ಗೆ 09 ಗಂಟೆಯ ಮುಂಚೆ ಮತ್ತು ಸಂಜೆ 06 ಗಂಟೆಯ ನಂತರ ಕರೆ ಮಾಡುವುದಾಗಲೀ, ಮನೆಯ ಬಳಿ ಹೋಗುವುದಾಗಲೀ ಮಾಡುವಂತಿಲ್ಲ. ಅನಗತ್ಯವಾಗಿ ಮಾನಹಾನಿ, ಕಿರುಕುಳ ನೀಡುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಕೇಸ್ ದಾಖಲು ಮಾಡಿಕೊಳ್ಳಲಾಗುವುದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.