ಹುಬ್ಬಳ್ಳಿ: ಬ್ಯಾಂಕಿಂಗ್ ಕೆಲಸಗಳಿಗೆ ಸಹಾಯವಾಗಲೆಂಬ ಉದ್ದೇಶದಿಂದ ‘ಮಾಯಾ’ ಎಂಬ ರೋಬೋಟ್ ಅನ್ನು ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಅನ್ವೇಷಿಸಿದ್ದಾರೆ. ಸಂಶೋಧನಾ ಸಹಾಯಕರಾದ ಅಭಿಜಿತ್ ಸಂಪತ್ ಕೃಷ್ಣ, ಕಾರ್ತಿಕ್ ಲಕ್ಕಮನಹಳ್ಳಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜಿ ಕೆ ಮತ್ತು ಶ್ರೀಧರ್ ತೊಡ್ಡಮಣಿ ಅವರ ಸಹಾಯದಿಂದ ಪೃಥ್ವಿ ದೇಶಪಾಂಡೆ ಮತ್ತು ಆಲ್ವಿನ್ ಎಂ ಎಂಬ ವಿದ್ಯಾರ್ಥಿಗಳು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದರು.
ಸುಮಾರು ಎಂಟು ತಿಂಗಳ ಪರಿಶ್ರಮದಿಂದ 5 ಲಕ್ಷ ರೂ. ವೆಚ್ಚದಲ್ಲಿ ಈ ರೋಬೋಟ್ ಅನ್ನು ತಯಾರಿಸಿದ್ದು, 15 ಕೆಜಿ ತೂಕ, 8-10 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ಇದು ಬ್ಯಾಂಕಿಂಗ್ ಸಮಯಕ್ಕೆ ಸಾಕಾಗುತ್ತದೆ ಎಂದು ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ ಅರುಣ್ ಗಿರಿಯಾಪುರ್ ಹೇಳಿದ್ದಾರೆ. ಈ ರೋಬೋಟ್ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲಿದ್ದು, ಖಾತೆಗಳನ್ನು ತೆರೆಯಲು ಗ್ರಾಹಕರಿಗೆ ಸಲಹೆ ನೀಡುವುದು, ಸಂದೇಹಗಳಿದ್ದಲ್ಲಿ ಗೊತ್ತುಪಡಿಸಿದ ಕೌಂಟರ್‌ಗಳಿಗೆ ಕಳುಹಿಸುವುದು ಮುಂತಾದ ಎಲ್ಲಾ ಬ್ಯಾಂಕಿಂಗ್ ಚಟುವಟಿಕೆಗಳನ್ನು ಇದರಲ್ಲಿ ಪ್ರೋಗ್ರಾಮ್ ಮಾಡಲಾಗಿದೆ.
ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಇದು ಗ್ರಾಹಕರ ಮುಖಗಳನ್ನು ಗುರುತಿಸುತ್ತದೆ ಮತ್ತು ಚಾಟ್‌ಬಾಟ್ ಬಳಸುವ ಮೂಲಕ ಅವರಿಗೆ ಪ್ರತಿಕ್ರಿಯಿಸುತ್ತದೆ. ಬ್ಯಾಂಕಿಂಗ್ ಸಮಯದ ನಂತರ, ಅದು ಸ್ವಯಂಚಾಲಿತವಾಗಿ ಡಾಕಿಂಗ್ ಗ್ರೌಂಡ್ ಗೆ ಹೋಗಿ ಬ್ಯಾಟರಿಗಳನ್ನು ಯಾವುದೇ ಮಾನವನ ಸಹಾಯವಿಲ್ಲದೆ ಚಾರ್ಜ್ ಮಾಡಿಕೊಳ್ಳುತ್ತದೆ.










