ಬೆಳಗಾವಿ : ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಶೇಕಡಾ 30ರಷ್ಟು ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅರಣ್ಯ ನಿರ್ಮಿಸಲು ಭೂಮಿ ಇಲ್ಲದ ಜಿಲ್ಲೆಗಳಲ್ಲಿ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆಗೆ ಸೇರಿ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಲೀನ ಮಾಡದೆ ಅರಣ್ಯ ಬೆಳೆಸಲು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ. 70 ರಷ್ಟು ಅರಣ್ಯ ಇದೆ. ಆದರೆ ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶೇ. 10 ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ. ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕವಾಗಿದೆ. ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು.