ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸ್ಫೋಟಕ ಆಡಿಯೊ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮಾತಾಡಿದ್ದಾರೆ. ಓರ್ವ 545 ಪಿಎಸ್ಐ ನೇಮಕಾತಿಯಲ್ಲಿ ಆಯ್ಕೆ ಆದವರು, ಇನ್ನೋರ್ವರು ಮಧ್ಯವರ್ತಿ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಆಡಿಯೊ ಬಿಡುಗಡೆ ಮಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಿಯಾಂಕ್ ಖರ್ಗೆ, 545ರ ಅಕ್ರಮ ಜೊತೆ, ಜೊತೆಗೆ ಮುಂದಿನ 402 ಪೋಸ್ಟ್ ಗಳನ್ನು ಸಹ ಬುಕ್ ಮಾಡಲಾಗಿದೆ. ಈ ಸಂಬಂಧ 371 ಜೆ ಸರಿಯಾಗಿ ಜಾರಿ ಆಗಿಲ್ಲ ಅಕ್ರಮ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಕೋರ್ಟ್ ಗೆ ಹೋಗಿದ್ದಾರೆ. ಆದರೂ ಏನು ಆಗಲ್ಲ ಅಂತ ಆಯ್ಕೆಯಾದ ಪಿಎಸ್ಐ ಹೇಳುತ್ತಾನೆ. ಈ ಪ್ರಕರಣದಲ್ಲಿ ಮೇಲಿಂದ ಕೆಳಗಿನವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದ್ದಾರೆ.
ಪಿಎಸ್ಐ 545 ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್, ನಂತರ ಮುಂದೆ ನಡೆಯುವ 402 ಪಿಎಸ್ಐ ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ. ಈ ಅಕ್ರಮದಲ್ಲಿ ನೇಮಕವಾದವರು ಶ್ರೀರಾಮ ಸೇನೆ, ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮದ ಹಿಂದೆ ದೊಡ್ಡ ಜಾಲ ಇದೆ. ಇದರ ದುಡ್ಡು ದೊಡ್ಡ ಮಟ್ಟದವರೆಗೂ ತಲುಪುತ್ತಿದೆ. ಅಭ್ಯರ್ಥಿಗಳು, ಜೂನಿಯರ್ ಕಿಂಗ್ಪಿನ್ಗಳನ್ನು ಹಿಡಿದರೆ ಸಾಲಲ್ಲ. ಇದರ ಹಿಂದಿರುವ ದೊಡ್ಡ ದೊಡ್ಡವರನ್ನು ಬಲೆಗೆ ಹಾಕಬೇಕು ಎಂದರು.










