ಅವಳೆಂದೂ ಅವನೊಂದಿಗೆ ಕೈ ಬೆಸೆದು ನಡೆದಿರಲಿಲ್ಲ, ಅವನ ಕಣ್ಣುಗಳ ಹೊಳಪಿನಲ್ಲಿ ಅರಳಿದ ಕನಸಿಗೆ ಜೊತೆಯಾಗಿರಲಿಲ್ಲ, ಪ್ರೀತಿ ಮುನಿಸಿನ ಪಾಲುದಾರಳಾಗಿರಲಿಲ್ಲ, ಕೊನೆಯ ತನಕ ಜೊತೆಗಿರುವೆನೆಂಬ ವಾಗ್ದಾನವನ್ನು ಮಾಡಿರಲಿಲ್ಲ.ಅವಳು ಬಾಳಿನ ಬಹುದೊಡ್ಡ ದುರ್ಘಟನೆಯಾದ ರಸ್ತೆ ಅಪಘಾತದಲ್ಲಿ ತನ್ನ ಸುಂದರ ಮುಖವನ್ನು ನುಜ್ಜುಗುಜ್ಜಾಗಿಸಿಕೊಂಡು. ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುವಂತಿದ್ದ ಮುದ್ದಾದ ಕಣ್ಣು,ತುಟಿ, ಮೂಗು, ಎಲ್ಲವನ್ನು ಕಳೆದುಕೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಹತ್ತಾರು ಸರ್ಜರಿಗಳನ್ನು ಮಾಡಿಸಿಕೊಂಡು ಕೊನೆಗೆ ತಮಿಳುನಾಡಿನ ತನ್ನೂರಿಗೆ ಮರಳಿದ್ದಳು. ಹೌದು ಜಯಪ್ರಕಾಶ್ ಅಸ್ತಿತ್ವವನ್ನೇ ಕಳೆದುಕೊಂಡು ಮಾಂಸದ ಮುದ್ದೆಯಂತಾಗಿದ್ದ ವದನದ ಸುನೀತಾಳನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ್ದು ನಿಜಕ್ಕೂ ಎಲ್ಲರನ್ನೂ ಬೆರಗಾಗುವಂತೆ ಮಾಡಿತ್ತು.

ಎಲ್ಲ ಮಧ್ಯಮ ವರ್ಗದ ಹೆಣ್ಣುಮಕ್ಕಳಂತೆ ಸುನೀತಾ ಕೂಡ ನೂರು ಆಸೆ,ಕನಸುಗಳೊಂದಿಗೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿಳಿದಿದ್ದು 2004ರಲ್ಲಿ ಚಾಣಕ್ಷೆ,ಸುಂದರಿಯಾಗಿದ್ದವಳಿಗೆ ಬೆಂಗಳೂರು ಆಶ್ರಯದ ಜೊತೆಗೆ ಸ್ವತಂತ್ರ ಬದುಕಿನ ಅನುಭವವನ್ನು ನೀಡಿತ್ತು. ಬಾಲ್ಯದಿಂದಲೂ ಹೆತ್ತವರ ಅನಾದಾರಗಳಿಗೆ ತುತ್ತಾದ ಹುಡುಗಿ ಆತ್ಮೀಯತೆ ತೋರಿದ ಗೆಳೆಯನ ಸಾಂಗತ್ಯದಲ್ಲಿ ಸುಖವಾಗಿರುವೆನೆಂದು ಬಯಸಿ ಲಿವಿಂಗ್ ಟುಗೆದರ್ ಸಿಸ್ಟಮ್ ನಲ್ಲಿ ಬದುಕತೊಡಗಿದಳು. ಅಲ್ಲೂ ಕೂಡ ಬದುಕನ್ನು ಕಣ್ಣೀರಾಗಿಸಿಕೊಂಡವಳನ್ನು ಮತ್ತೆ ಆಲಂಗಿಸಿಕೊಂಡಿದ್ದು ಇನ್ನೊಬ್ಬ ಗೆಳೆಯ ಮೊದಲಿನ ಸಂಬಂಧದಲ್ಲಿ ಸಾಕಷ್ಟು ನೋವನುಭವಿಸಿ ಮತ್ತೆ ನೋವಿನ ಅಡಿಯಾಳಾಗಬಾರದು ಎಂದು ಜಾಗ್ರತೆಯಾಗಿದ್ದರೂ ಬಾಲ್ಯದಿಂದಲೂ ಕಾಡಿದ್ದ ಒಂಟಿತನ ಮತ್ತೊಬ್ಬ ಗೆಳೆಯನನ್ನು ಬದುಕಿಗೆ ತಂದುಕೊಟ್ಟಿತ್ತು. ಶುರುವಲ್ಲಿ ಮಧುರವಾಗಿದ್ದ ಬಾಂಧವ್ಯ ಪ್ರೀತಿ ಮೊಗೆದು ಕೊಟ್ಟವಳನ್ನು ದುಃಖಕ್ಕೆ ತಳ್ಳಲು ಬಹುದಿನ ಬೇಕಾಗಲಿಲ್ಲ.ತನ್ನ ಕಾರ್ಯಕ್ಷಮತೆ,ಮತ್ತು ಪ್ರತಿಭೆಯಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡವಳಿಗೆ ಒಂಟಿತನ ಕಟ್ಟಿಟ್ಟ ಬುತ್ತಿಯಾಗಿತ್ತು.ಇವೆಲ್ಲದರ ಜಂಜಾಟ ಬೇಡವೆಂದು ಊರಿಗೆ ಮರಳಿ ಹೊರಟವಳನ್ನು ವಿಧಿ ತನ್ನ ಆಟಕ್ಕೆ ಬಲಿಯಾಗಿಸಿತ್ತು.ಸುಂದರಿಯಾಗಿದ್ದಾಗ ಬರಸೆಳೆದು ಅಪ್ಪಿದ್ದ ಗೆಳೆಯ ನೆಪ ಮಾತ್ರಕ್ಕೆ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗಿದ್ದ. ಇಷ್ಟೆಲ್ಲಾ ಅಘಾತಗಳಿಗೆ ಎದೆಯೊಡ್ಡಿದ್ದ ಹುಡುಗಿ ತನ್ನೂರಿಗೆ ಮರಳಿದಾಗ ಜೊತೆಯಾಗಿದ್ದು ಅವಳ ಜೊತೆಗೆ ಪಿ.ಯು.ಸಿ ಓದಿದ್ದ ಜಯಪ್ರಕಾಶ್.
ಜಯ್ ಗೆ ತನ್ನ ಕಾಲೇಜು ದಿನಗಳಲ್ಲೇ ಸುನೀತಾಳೆಂದರೆ ಅಚ್ಚುಮೆಚ್ಚು. ಮುದ್ದಾಗಿದ್ದ ಜಾಣೆ ಆಗಲೇ ಜಯ್ ನ ಪ್ರಪಂಚವನ್ನು ಆವರಿಸಿದ್ದಳು. ಆದರೆ ಉತ್ತಮ ಗೆಳೆಯರಾಗಿದ್ದ ಅವರು ಹಾಗೇ ಉಳಿದಿದ್ದರು.ಅವನೆಂದೂ ಮನ ಬಿಚ್ಚಿ ಪ್ರೀತಿ ನಿವೇದನೆ ಮಾಡಿಕೊಂಡಿರಲಿಲ್ಲ. ಮುಂದೆ ಸುನೀತಾ ಬೆಂಗಳೂರು ಸೇರಿದ ನಂತರ ಜಯ್ ನನ್ನು ಭೇಟಿಯಾಗಿದ್ದು ಒಂದೇ ಬಾರಿ ಅದು ಕೂಡ ಹಳೆ ಗೆಳೆಯರ ಗೆಟ್ ಟುಗೆದರ್ ಒಂದರಲ್ಲಿ ಮತ್ತೆ ಜಯಪ್ರಕಾಶ್ ಸುನೀತಾಳನ್ನು ಭೇಟಿಯಾಗಿದ್ದು ಅವಳ ಕೂರೂಪಿ ಮುಖದೊಂದಿಗೆ.
ಸುನೀತಾಳನ್ನು ಕಂಡೊಡನೆ ಅವಳ ಬಗ್ಗೆ ನೂರು ಕನಸು ಕಂಡವನಿಗೆ ಅನಿಸಿದ್ದು ಇವಳನ್ನು ಈಗ ನಾನೊಬ್ಬನೇ ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯ. ಎಳವೆಯಲ್ಲಿ ಹುಟ್ಟಿದ್ದ ಪ್ರೀತಿ ಹೆಮ್ಮರವಾಗಿ ಅದರ ನೆರಳಿನಲ್ಲಿ ತನ್ನ ಆರಾಧ್ಯ ದೇವತೆಯನ್ನು ಇನ್ನಿಲ್ಲದಂತೆ ಕಾಪಾಡಬೇಕೆಂಬ ನಿರ್ಧಾರಕ್ಕೆ ಮುನ್ನುಡಿ ಬರೆದಾಗಿತ್ತು. ಸಾಕಷ್ಟು ಸ್ಥಿತಿವಂತನಾಗಿದ್ದ ಜಯ್ ಹೆತ್ತವರ ಹಾಗೂ ಸಮಾಜದ ಮಾತಿಗೆ ಕಿವಿಗೊಡದೆ ಸುನೀತಾಳ ಆರೈಕೆಗೆ ತೊಡಗಿದ. ಹತ್ತಾರು ಸರ್ಜರಿಗಳಿಗೊಳಗಾದ ಸುನೀತಾಳಿಗೆ ಆತ್ಮಸ್ಥೈರ್ಯ ತುಂಬುತ್ತಾ ಮಗುವಿನಂತೆ ಅವಳನ್ನು ನೋಡಿಕೊಂಡ ಜಯ್ ನ ನಿಷ್ಕಲ್ಮಷ ಪ್ರೀತಿಯ ಮುಂದೆ ಎಲ್ಲಾ ಅಮರಪ್ರೇಮಿಗಳು ಮಸುಕಾಗಿ ಬಿಡುತ್ತಾರೆ ಅನಿಸುವಷ್ಟು ಪ್ರೀತಿಯನ್ನು ಮೊಗೆದು ತನ್ನ ಗೆಳತಿಗೆ ಕೊಟ್ಟ. ನಿಜಕ್ಕೂ ಪ್ರೀತಿ ಸಾಕ್ಷಾತ್ಕಾರದ ದೇವರಂತೆ ಜಯ್ ಪ್ರಕಾಶ್ ಸುನೀತಾಳ ಅರೆಕುರುಡಾದ ಕಂಗಳಲ್ಲಿ ಭರವಸೆಯ ಹೊಳಪು ಮೂಡಿಸಿದ್ದ.ಮುಂದೆ ಸುನೀತಾಳನ್ನು ಮದುವೆಯಾಗಿ ಬೆಂಗಳೂರಿಗೆ ಬಂದು ನೆಲಸಿದ ನಂತರ ಅಪೂರ್ವ ನಿಧಿ ಸಿಕ್ಕಷ್ಟು ಸಂಭ್ರಮಿಸಿದ ಜಯ್ ನ ಪ್ರೀತಿಗೆ ಖಂಡಿತಾ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅನಿಸಿಬಿಡುತ್ತದೆ. ಎಂದೋ ಎದೆಯಲ್ಲಿ ಅರಳಿದ್ದ ಪ್ರೀತಿಯನ್ನು ಕೊನೆಯವರೆಗೂ ಕಾಪಾಡುತ್ತೇನೆ ಅಂದವನು ಸುನೀತಾ ಸಾಕಷ್ಟು ಸವಾಲುಗಳೊಂದಿಗೆ ಜಯ್ ನ ಪ್ರೀತಿ ಕುಡಿಯನ್ನು ಹೊತ್ತು ಜನ್ಮ ನೀಡಿದಾಗ ಮಗುವಿನಂತೆ ಮುದ್ದಿನ ಮಡದಿಯ ಕೈ ಹಿಡಿದು ಕಣ್ಣೀರಿಟ್ಟಿದ್ದ.
ಇಂದು ಎರಡು ಮುದ್ದಾದ ಮಕ್ಕಳೊಂದಿಗೆ ಒಲವಿನ ಸಂಸಾರ ನಡೆಸುತ್ತಿರುವ ಸುನೀತಾ ಜಯಪ್ರಕಾಶ್ ಕಥೆ ಹಲವಾರು ಪತ್ರಿಕೆಗಳಲ್ಲಿ ವಾಹಿನಿಗಳಲ್ಲಿ ಬಿತ್ತರವಾಗಿದ್ದರೂ ಯಾಕೋ ಮನಸ್ಸು ಜಯ್ ನ ಅಚಲ ಪ್ರೀತಿಯನ್ನು ಎರಡಕ್ಷರವನ್ನಾಗಿಸುವ ಯೋಚನೆಗೆ ಪ್ರೇರೇಪಿಸಿದೆ .ಬಾಲ್ಯದಿಂದಲೂ ಪ್ರೀತಿ ಕಾಣದ ಸುನೀತಾಳ ದುರದೃಷ್ಟದ ಬದುಕಿನಲ್ಲಿ ಭಗವಂತ ಸುರಿಸಿರುವ ಅದೃಷ್ಟದ ಮಳೆ, ಅಂಗಳದಲ್ಲಿ ಸುರಿಯುತ್ತಿರುವ ಸೋನೆ ಮಳೆಯಂತೆ ನಿರಂತರವಾಗಿರಲಿ ಎಂದು ಹೃದಯ ಆಶಿಸಿದೆ.









