ನಿರುದ್ಯೋಗಿ ಯುವಕರಿಗೆ ‘ಯುವನಿಧಿ’ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು: ಸಿದ್ದರಾಮಯ್ಯ.

47
firstsuddi

ಬೆಂಗಳೂರು: ನಿರುದ್ಯೋಗಿ ಯುವಕರಿಗೆ ‘ಯುವನಿಧಿ’ ಯೋಜನೆಯ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಉದ್ಯೋಗ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

“ದೇಶದ ಪ್ರಮುಖ ಸಮಸ್ಯೆಯಾಗಿರುವ ನಿರುದ್ಯೋಗದ ಸಮಸ್ಯೆ ಕಳೆದ 10 ವರ್ಷಗಳಲ್ಲಿ ಬೃಹತ್ ಗಾತ್ರದಲ್ಲಿ ಬೆಳೆದಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿ ಯುವ ಸಮೂಹದ ಮತ ಗಳಿಸಿದ್ದರು. ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿ, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ಪ್ರತೀ ವರ್ಷ ನಿರುದ್ಯೋಗದ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ ಶೇ 8.40ಕ್ಕೆ ಏರಿಕೆಯಾಗಿದೆ” ಎಂದು ವಿವರಿಸಿದರು.

“ಆದರೆ ನಾವು ಯುವನಿಧಿಯನ್ನೂ ಕೊಡುತ್ತೇವೆ ಉದ್ಯೋಗವನ್ನೂ ಸೃಷ್ಟಿಸುತ್ತೇವೆ. ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿಯನ್ನೂ ನೀಡುತ್ತೇವೆ. ಇದು ನಮ್ಮ ಸರ್ಕಾರ ವಿದ್ಯಾರ್ಥಿ ಯುವಜನರಿಗೆ ನೀಡುವ ಅಭಯ” ಎಂದು ಭರವಸೆ ನೀಡಿದರು. ಹೊಸ ಉದ್ಯೋಗಗಳ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ ಜಿಟಿಡಿಸಿಗಳ ಜತೆಗೆ ಹೊಸದಾಗಿ ಇನ್ನಷ್ಟು ಜಿಟಿಡಿಸಿಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಈ ವೇಳೆ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.