ಐಸ್ ಕ್ರೀಮ್ ತಿಂದು ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್- ಹೆತ್ತ ಮಕ್ಕಳಿಗೆ ವಿಷ ಉಣಿಸಿದ ತಾಯಿ!

45
firstsuddi

ಮಂಡ್ಯ: ಐಸ್ ಕ್ರೀಮ್ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ನಡೆದ ಘಟನೆಯಲ್ಲಿ ಅವಳಿ ಮಕ್ಕಳು ಐಸ್ ಕ್ರೀಮ್ ತಿಂದು ಅಸ್ವಸ್ಥರಾದ ಬಳಿಕ ಸಾವು ಕಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಿದ್ದು, ತಾಯಿಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವು ಕಂಡಿದ್ದರು.

ಪೊಲೀಸ್ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದು ಗೊತ್ತಾಗಿದೆ. ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ವಿಷ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾಳೇ ಕೌಟುಂಬಿಕ ಕಲಹದಿಂದ ಮೂರು ಮಕ್ಕಳಿಗೆ ವಿಷ ಉಣಿಸಿರುವುದು ಬಯಲಾಗಿದೆ. ಪೂಜಾ, ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದರು. ಮನೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿದ್ದು, ಜಗಳದಿಂದ ಬೇಸತ್ತು ನಿನ್ನೆ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾರೆ. ಮನೆಯಲ್ಲಿ ಇದ್ದ ಜಿರಳೆಯ ಲಕ್ಷ್ಮಣ ರೇಖೆಯನ್ನು ಊಟಕ್ಕೆ ಹಾಕಿ ಮಕ್ಕಳಿಗೆ ಪೂಜಾ ತಿನ್ನಿಸಿದ್ದಳು. ಬಳಿಕ ಅದೇ ಲಕ್ಷ್ಮಣ ರೇಖೆಯನ್ನು ಪೂಜಾ ಕೂಡ ಸೇವಿಸಿದ್ದಳು, ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು. ತಾಯಿ ಪೂಜಾ ಹಾಗೂ ಮೊದಲ ಮಗಳು ಬೃಂದಾಗೆ ಚಿಕಿತ್ಸೆ ಮುಂದುವರಿದೆ.