ಹಣಕ್ಕಾಗಿ 7 ವರ್ಷದ ಬಾಲಕನ ಮಾರಾಟ: ಆರೋಪಿಗಳ ಬಂಧನ.

29

ಬೆಳಗಾವಿ: ಹಣಕ್ಕಾಗಿ 7 ವರ್ಷದ ಬಾಲಕನ ಮಾರಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಕ್ಕಳ ಮಾರಾಟ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಗಾವಿಯಲ್ಲಿ ಸದ್ದು ಮಾಡುತ್ತಿವೆ. ಕಳೆದ 3 ತಿಂಗಳುಗಳಲ್ಲಿ ಮಕ್ಕಳ ಕಳ್ಳಸಾಗಣೆ ಸಂಬಂಧಿತ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರದ 7 ವರ್ಷದ ಬಾಲಕನನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮಗುವಿನ ಮಲತಂದೆ ಸದಾಶಿವ ಶಿವಬಸಪ್ಪ ಮಗದುಮ್, ಸಂಗೀತಾ ವಿಷ್ಣು ಸಾವಂತ್, ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ, ಲಕ್ಷ್ಮಿ ಬಾಬು ಗೋಲಭಾವಿ ಬಂಧಿತ ಆರೋಪಿಗಳಾಗಿದ್ದಾರೆ. ಶಿವಬಸಪ್ಪ ಮಗದುಮ್, ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಸೇರಿ ಬಾಲಕನನ್ನು ಬೆಳಗಾವಿ ನಗರದ ದಿಲಶಾದ್ ಸಿಕಂದರ್ ತಹಸೀಲ್ದಾರ್ ಎಂಬ ಮಹಿಳೆಗೆ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. 4 ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ಮಗದುಮ್ ವಿವಾಹವಾಗಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇದರಿಂದ ಬೇಸತ್ತು ಹುಡುಗನನ್ನು ಮಾರಾಟ ಮಾಡಿದ್ದರು ಎಂದು ತಿಳಿಸಲಾಗಿದೆ.