ಮೂಡಿಗೆರೆಯಲ್ಲಿ ಅಂತರಾಷ್ಟ್ರೀಯ ಕಾಫಿ ಉತ್ಸವ ಹಾಗೂ ರೈತ ಬೆಳೆಗಾರರ ಬೃಹತ್ ಸಮಾವೇಶ

816

ಮೂಡಿಗೆರೆ : ಮಲೆನಾಡು ಭಾಗದಲ್ಲಿ ನೂರಾರು ಸಮಸ್ಯೆಗಳನ್ನು ಹೊತ್ತು ಕಾಡು ಪ್ರಾಣಿಗಳ ಉಪಟಳಕ್ಕೆ ಹೆದರಿ ಕಾಫಿ ತೋಟಗಳ ಸಹಿತ ಬತ್ತದ ಗದ್ದೆಗಳಲ್ಲಿ ಬೆಳೆ ಬೆಳೆಯುವುದೇ ಬೆಳೆಗಾರರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಿದೆ ಎಂದು ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ವಿಷಾಧ ವ್ಯಕ್ತಪಡಿಸಿದರು.

ಅವರು ಪಟ್ಟಣದ ರೈತ ಭವನದಲ್ಲಿ ಮಂಗಳವಾರ ತಾಲೂಕು ಬೆಳೆಗಾರರ ಸಂಘದ ವತಿಯಿಂದ ನಡೆದ ಅಂತರಾಷ್ಟ್ರೀಯ ಕಾಫಿ ಉತ್ಸವ ಹಾಗೂ ರೈತ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಅಮಾಯಕ ರೈತರು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಒಡೆತನ ತಮಗೆ ಸೇರಿದ್ದಲ್ಲ ಎಂದು ಸರಕಾರದ ವತಿಯಿಂದ ತಿಳಿದಾಗ ರೈತರಿಗೆ ಬರಸಿಡಿಲು ಬಡಿದಂತಾಗಿತ್ತು. ರೈತರ ಒತ್ತುವರಿ ಭೂಮಿಯು ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ್ದೆಂದು ಈ ಹಿಂದೆ ನೋಟೀಸು ನೀಡಲಾಗಿತ್ತು. ಈ ಸಮಸ್ಯೆಯನ್ನು ಕಂದಾಯ ಸಚಿವರು ಶಾಶ್ವತವಾಗಿ ಪರಿಹರಿಸಬೇಕೆಂದು ತಿಳಿಸಿದ ಅವರು, ಫಾ.ನಂ 53 ಯಲ್ಲಿ ಅರ್ಜಿ ಸಲ್ಲಿಸಿ ಕಾಯತ್ತಾ ಕುಳಿತಿರುವ ರೈತರನ್ನು ಅರ್ಜಿ ವಿಲೇವಾರಿ ಮೂಲಕ ರಕ್ಷಿಸಬೇಕು. ಮಸಗಲಿ ಅರಣ್ಯದಂಚಿನಲ್ಲಿರುವ ರೈತರನ್ನು ಅವರಷ್ಟಕ್ಕೆ ಬದುಕಲು ಅವಕಾಶ ಕಲ್ಪಿಸಬೇಕು. ಒಕ್ಕಲೆಬ್ಬಿಸುವ ಕಾರ್ಯಕ್ಕೆ ಸರಕಾರ ಕೈ ಹಾಕಬಾರದು ಎಂದು ಮನವಿ ಮಾಡಿದರು.

ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜ್ಯದಲ್ಲಿ ಕಾಫಿ ಉಧ್ಯಮ 1.ಕೋಟಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ. 20.ಲಕ್ಷ ಬೆಳೆಗಾರರು ಕಾಫಿ ಉಧ್ಯಮವನ್ನೆ ನಂಬಿ ಬದುಕುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಮೂಲಕ ರೈತರ ಒತ್ತುವರಿ ಜಮೀನು ಉಳಿವಿಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಕಾನೂನು ರೂಪಿಸಲು ಸರಕಾರ ಮುಂದಾಗಬೇಕು. ಅಲ್ಲದೇ ಕಳಸ ಇನಾಂ ಭೂಮಿ ಸಮಸ್ಯೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇನಾಂ ಭೂಮಿಯನ್ನು ಸರಕಾರ ಉಳಿಸಬೇಕು. ಮೂಡಿಗೆರೆ ತಾಲೂಕು ಕೇಂದ್ರದಿಂದ ಕಳಸದ ಎಸ್.ಕೆ.ಬಾರ್ಡರ್ ವರೆಗೂ 102 ಕಿ.ಮೀ. ಅಂತರÀವಿದೆ. ಕಳಸ ಹೋಬಳಿಯನ್ನು ತಾಲೂಕಾಗಿ ಘೋಷಿಸಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

                ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, 94 (ಸಿ)ರಲ್ಲಿ ನೂರಾರು ಗ್ರಾಮಸ್ಥರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ವ್ಯಕ್ತಿಯೋರ್ವರು ನ್ಯಾಯಾಲದ ಮೆಟ್ಟಿಲೇರಿರುವುದರಿಂದ ಇದು ತಟಸ್ಥವಾಗಿದೆ. ಆದ್ದರಿಂದ ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವ ಮೂಲಕ ಈ ಅರ್ಜಿಗಳನ್ನು ವಿಲೇವಾರಿಗೊಳಿಸಲು ಮುಂದಾಗಬೇಕು. ಹಂಗಾಮಿ ಸಾಗುವಳಿ ಚೀಟಿಯನ್ನು ಸರಕಾರ ಹಿಂಪಡೆದು ಖಾಯಂ ಹಕ್ಕು ಪತ್ರ ನೀಡಬೇಕು. 192 (ಎ) ಕಾಯಿದೆಗೆ ತಿದ್ದುಪಡಿ ತರುವಂತೆ ಕೋರಿ ತಾವು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಲ್ಲಿ ಮನವಿ ಮಾಡಿದಾಗ ಕಂದಾಯ ಸಚಿವ ಕಾಗೂಡು ತಿಮ್ಮಪ್ಪ ಅವರೊಂದಿಗೆ ಮಾತನಾಡಿ, ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಕಾನೂನಿಗೆ ತಿದ್ದುಪಡಿ ತರವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವರು ಕ್ರಮ ಕೈಗೊಳ್ಳಬೇಕು. ಡೀಮ್ಡ್ ಫಾರಿಸ್ಟ್‍ನನ್ನು ವಾಪಾಸು ಕಂದಾಯ ಇಲಾಖೆಗೆ ತೆಗೆದುಕೊಂಡು  ವಸತಿರಹಿತರ ಉಪಯೋಗಕ್ಕೆ ಅನುಕೂಲವಾಗುವಂತೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

                ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಭೂಮಿಯ ಫಲವತ್ತತೆಯನ್ನು ಗಮನಿಸಿ ತಕ್ಕ ಬೆಳೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತಂದಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ  ಸರಕಾರದ ಜೊತೆಗೆ ಕೈ ಜೋಡಿಸುವ ಕೆಲಸ ರೈತರು ಮಾಡಬೇಕು ಎಂದ ಅವರು, ಪರಿಸರ ನಾಶ ಮಾಡುವ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಹರಿಯುವ ನದಿಗಳು ಬತ್ತಿ ಹೋಗುತ್ತಿವೆ. ಆದ್ದರಿಂದ ಪರಿಸರ ನಾಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಪರಿಸರ ಉಳಿವಿಗೆ ಬೆಳೆಗಾರರು ಮುಂದಾಗಬೇಕು ಎಂದು ಕರೆ ನೀಡಿದರು.

ಸಮೇವೇಶವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಎಬಿಸಿ ಕಂಪನಿ ಮಾಲಿಕ ಗಂಗಯ್ಯ ಹೆಗ್ಡೆ ಅವರು, ಬೆಳೆಗಾರರ ಸಂಘದ ಸಮುದಾಯ ಭವನದ ಶಿಲಾನ್ಯಾಸ ಅನಾವರಣಗೊಳಿಸಿದರು. ರೈತ ಭವನದ ಹೊರಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನವನ್ನು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬೆಳೆಗಾರ ಸಂಘದ ಅಧ್ಯಕ್ಷ ಬಿ.ಬಸವರಾಜ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ತಾ.ಪಂ ಅಧ್ಯಕ್ಷ ಕೆ.ಸಿ.ರತನ್, ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಬಿ.ಎಲ್.ರಾಮದಾಸ್, ಮಾಜಿ ಜಿ.ಪಂ. ಅಧ್ಯಕ್ಷ ಟಿ.ಡಿ.ರಾಜೇಗೌಡ, ಕೋಮಾರ್ಕ್ ಸಂಸ್ಥೆ ರಾಜ್ಯಾಧ್ಯಕ್ಷ ಅರೆಕುಡಿಗೆ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯ ಕುಮಾರ್, ಕಾಂಗ್ರೆಸ್ ಕಿಸಾನ್ ಸೇಲ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ, ಬೆಳೆಗಾರ ಸಂಘದ ಮುಖಂಡರಾದ ಡಿ.ಬಿ.ಸುಬ್ಬೇಗೌಡ, ಬಾಲಕೃಷ್ಣ, ಕೆಂಜಿಗೆ ಕೇಶವ, ಡಿ.ಎಲ್.ಅಶೋಕ್, ಎಂ.ಎನ್.ಕಲ್ಲೇಶ್, ಹಳಸೆ ಶಿವಣ್ಣ, ಡಿ.ಎಸ್.ರಘು, ಕೊಲ್ಲಿಬೈಲ್ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here