ಬೆಂಗಳೂರು : ಮುಂಬರೋ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಮನೆ ಮನೆಗೆ ಕುಮಾರಣ್ಣ ಎಂಬ ವಿನೂತನ ಯೋಜನೆಯನ್ನ ರಾಜ್ಯಾದ್ಯಂತ ಜಾರಿಗೆ ತರಲು ಜೆಡಿಎಸ್ ನಿರ್ಧರಿಸಿದೆ. ಈ ಮೂಲಕ ಕಾಂಗ್ರೆಸ್ ನ ಮನೆ ಮನೆಗೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜೆಡಿಎಸ್ ಸೆಡ್ಡು ಹೊಡೆದಿದೆ.
ಜೆಡಿಎಸ್ ಶಾಸಕಾಂಗ ಸಭೆಗೂ ಮುನ್ನ ಮಾತನಾಡಿದ ಹೆಚ್.ಡಿ.ದೇವೇಗೌಡರು, ಪಕ್ಷ ಸಂಘಟನೆ ಹೇಗಿರಬೇಕು, ನಮ್ಮ ಹೊಣೆಗಾರಿಕೆ ಏನು ಎಂದು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ 32 ಶಾಸಕರು ಸೇರಿದಂತೆ, 12 ಜನ ವಿಧಾನ ಪರಿಷತ್ ಸದಸ್ಯರೂ ಭಾಗಿಯಾಗಿದ್ದಾರೆ. 224 ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಗೆಲುವಿಗಾಗಿ ಯಾವ ರೀತಿ ಹೋರಾಡಬೇಕು ಎಂದು ಚರ್ಚಿಸುತ್ತೇವೆ ಎಂದರು.
ಈಗಾಗಲೇ ಪಕ್ಷದ ಕೆಲವು ಪ್ರಮುಖರಿಗೆ ಜವಾಬ್ದಾರಿ ವಹಿಸಲಾಗಿದೆ. ಇರುವ 33 ಕ್ಷೇತ್ರಗಳನ್ನ ಉಳಿಸಿಕೊಂಡು, ಉಳಿದ ಕ್ಷೇತ್ರಗಳಲ್ಲೂ ಗೆಲುವಿಗಾಗಿ ಪ್ರಯತ್ನಿಸುತ್ತೇವೆ ಎಂದರು. ಕುಮಾರಸ್ವಾಮಿ 12 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ಆ ಕಡೆ ಹೆಚ್ಚು ಗಮನ ಕೊಡುವಂತಾಯ್ತು. ಆದರೀಗ, ಕುಮಾರಸ್ವಾಮಿ ಮನೆಗೆ ಬಂದಿದ್ದಾರೆ. ಆದ್ದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು. ರಾಜ್ಯ ಪ್ರವಾಸದ ತಂಡದಲ್ಲಿ ಯಾರು ಇರಬೇಕು. ಒಬ್ಬೊಬ್ಬರೇ ಹೋಗುವುದಕ್ಕಿಂತ ತಂಡವಾಗಿ ಪ್ರವಾಸ ಮಾಡಿದರೆ ಪಕ್ಷಕ್ಕೆ ಹೆಚ್ಚು ಬಲ ಬರಲಿದೆ. ಬಿಜೆಪಿಯ ವಿಸ್ತಾರಕ ಹಾಗೂ ಕಾಂಗ್ರೆಸ್‌ನ ಮನೆ ಮನೆಗೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸರಿಸಮನಾಗಿ ಮನೆ ಮನೆಗೂ ಕುಮಾರಣ್ಣ ಎಂಬ ಕಾರ್ಯಕ್ರಮವನ್ನ ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.