ಬೆಂಗಳೂರು : 2018ರ ವಿಧಾನಸಭಾ ಚುನಾವಣೆಗೆ ಸರ್ವ ವ್ಯಾಪಿ, ಸರ್ವ ಸ್ಪರ್ಶಿ ನಮ್ಮ ಪ್ರಣಾಳಿಕೆ. ಎಲ್ಲಾ ವರ್ಗದವರ ಮೇಲೂ ಈ ಪ್ರಣಾಳಿಕೆಯ ಬೆಳಕು ಚೆಲ್ಲಲಿದೆ ಎಂದು ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಹೇಳಿದ್ದಾರೆ. ಪ್ರಣಾಳಿಕೆ ಅನ್ನೋದು ಎಲ್ಲಾ ವರ್ಗದವರಿಗೂ ತಲುಪುವಂತಿರಬೇಕು. ಅದು ಚುನಾವಣಾ ಸಂದರ್ಭದಲ್ಲಿನ ಯಾಂತ್ರಿಕ ಪ್ರಕ್ರಿಯೆಯಾಗಬಾರದು. ನನ್ನನ್ನ ಪ್ರಣಾಳಿಕ ಸಮಿತಿ ಅಧ್ಯಕ್ಷರನ್ನಾಗಿಸಿದ್ದನ್ನ ಮಾಧ್ಯಮದಲ್ಲಿ ನೋಡಿದ್ದೇನೆ. ನಮ್ಮ ಸಮಿತಿಯಲ್ಲಿ ಪರಿಣಿತರು ಹಾಗೂ ರಾಜಕೀಯದ ಅನುಭವಿಗಳಿದ್ದಾರೆ ಎಂದರು.
ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಚರ್ಚೆಯಾಗಬೇಕು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರಣಾಳಿಕೆ ರಚಿಸುವುದಲ್ಲ ಎಂದ ಅವರು, ಈ ಬಾರಿಯ ನಮ್ಮ ಪ್ರಣಾಳಿಕೆ ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಆಗಿರುತ್ತದೆ. ಸಕಲ ವರ್ಗದವರಿಗೂ ಪ್ರಣಾಳಿಕೆಯ ಅಂಶ ಸ್ಪರ್ಶವಾಗಬೇಕು. ಆಗುತ್ತದೆ. ಪ್ರಧಾನಿ ಮೋದಿಯವರು ಹೇಳುವ ಪ್ರಕಾರ ನವ ಕರ್ನಾಟಕ ನಿರ್ಮಾಣಕ್ಕೆ ಪ್ರಣಾಳಿಕೆಯ ಅಂಶಗಳು ಬಹಳ ಮುಖ್ಯ ಎಂದರು.
6 ತಿಂಗಳ ಮುಂಚೆಯೇ ಪ್ರಣಾಳಿಕೆ ಸಮಿತಿ ರಚನೆ ಮಾಡಿರೋದ್ರಿಂದಲೇ ತಿಳಿಯುತ್ತೆ ನಾವು ಚುನಾವಣೆಯನ್ನ ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು. ನಮ್ಮ ಗುರಿ ಮಿಷನ್ 150. ಆದ್ದರಿಂದ ಚುನಾವಣಾ ಪ್ರಣಾಳಿಕೆ ಚೆನ್ನಾಗಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.