ಮೂಡಿಗೆರೆ : ಅನಾಧಿ ಕಾಲದಿಂದಲೂ ಜೀವಂತವಾಗಿರುವ ರೈತರ ಒತ್ತುವರಿ, ಕಾಡು ಪ್ರಾಣಿಗಳ ಹಾವಳಿ, ಡೀಮ್ಡ್ ಫಾರೆಸ್ಟ್ ಜಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ದವಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಅವರು ಪಟ್ಟಣದ ರೈತ ಭವನದಲ್ಲಿ ಮಂಗಳವಾರ ತಾಲೂಕು ಬೆಳೆಗಾರರ ಸಂಘದ ವತಿಯಿಂದ ನಡೆದ ಅಂತರಾಷ್ಟ್ರೀಯ ಕಾಫಿ ಉತ್ಸವ ಹಾಗೂ ರೈತ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿ, 22 ಜಾತಿಯ ಮರ ಕಡಿತಲೆಗೆ ಈ ಹಿಂದೆ ಕಾನೂನು ಜಾರಿಯಲ್ಲಿತ್ತು. ತಮ್ಮ ಸರಕಾರ ಬಂದ ನಂತರ ವಿವಿಧ ಜಾತಿಯ 42 ಮರಗಳ ಕಡಿತಲೆಗೆ ಅನುಮತಿ ನೀಡಲಾಗಿದೆ. ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗಗಳಿಗೆ ಸರಕಾರದ ಮಟ್ಟದಲ್ಲಿ ಉನ್ನತ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ ಅವರು, ಮಸಗಲಿ ಅರಣ್ಯ ಭೂಮಿ ಸಮಸ್ಯೆ ನ್ಯಾಯಾಲಯದಲ್ಲಿದ್ದು, ಅದರ ತೀರ್ಪು ಹೊರ ಬೀಳುವರಗೆ ಅಲ್ಲಿ ವಾಸವಾಗಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಅಲ್ಲಿನ ಜನ ವಾಸವಿರುವ ಪ್ರದೇಶವನ್ನು ಅವರಿಗೆ ಬಿಟ್ಟು ಸರಕಾರ ಪುನರ್ ವಸತಿ ಕಲ್ಪಿಸಲು ಉದ್ದೇಶಿಸಿರುವ ಜಾಗವನ್ನು ಅರಣ್ಯ ಇಲಾಖೆಗೆ ವಹಿಸಲು ಈ ಭಾಗದ ಶಾಸಕರು ಮನವಿ ಮಾಡಿದ್ದಾರೆ. ಆ ಬಗ್ಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಮುಂದಿನ ಪೀಳಿಗೆಗೆ ಭೂಮಿ ಬಿಟ್ಟು ಕೊಡಬೇಕೆಂದ್ದರೆ ಅದು ಅರಣ್ಯದಂಚಿನಲ್ಲಿ ಉಳಿಸಿಕೊಂಡಿರು ಭೂಮಿ ಮಾತ್ರವಾಗಿದೆ. ಕಾಡಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಮಳೆ ಮತ್ತು ಬೆಳೆ ಬೇಕೆಂದರೆ ಅರಣ್ಯ ಬೇಕು. ಅರಣ್ಯ ನಾಶದಿಂದಾಗಿ ರಾಜ್ಯದಲ್ಲಿ ಬರಗಾಲ ಪ್ರಾರಂಭವಾಗಿದೆ. ನದಿ ಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿತಕ್ಕೊಳಗಾಗಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಜನರ ಬದುಕು ನಾಶವಾಗುವ ಅಂಚಿನಲ್ಲಿದೆ. ಸರಕಾರ ಜನರ ಬದುಕನ್ನು ಕಟ್ಟಿಕೊಡಬೇಕಗಿದೆ. ಆದ್ದರಿಂದ ಅರಣ್ಯ ಉಳಿವಿಗೆ ಸರಕಾರ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದ ಅವರು, ಈ ಭಾಗದಲ್ಲಿ ಆನೆÀಗಳ ಸಹಿತ ಇತರೇ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೆಳೆಗಾರರು ಇದರಿಂದ ಭಯಬೀತರಾಗಿದ್ದಾರೆ. ಆನೆಗಳ ನಿಯಂತ್ರಣಕ್ಕೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಬ್ಯಾರಿಕೆಟ್ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಆದರೆ ಇಲ್ಲಿ ಚಿದ್ರ ಚಿದ್ರ ಅರಣ್ಯ ಪ್ರದೇಶವಿದಿದ್ದರಿಂದ ಪರ್ಯಾಯ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಕಾಡು ಪ್ರಾಣಿಗಳ ಮತ್ತು ಮಾನವ ಸಂಘರ್ಷದಿಂದ ಮಡಿದವರಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ರೈತರ ಬೆಳೆ ನಾಶಕ್ಕೂ ಎರಡು ಪಟ್ಟು ಪರಿಹಾರ ಹೆಚ್ಚಿಸಲಾಗಿದೆ.