ಸ್ವತಂತ್ರ ಧರ್ಮವಾಗೋದಕ್ಕೆ ಲಿಂಗಾಯತ ಧರ್ಮಕ್ಕೆ ಅರ್ಹತೆ ಇದೆ, ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಲಿ : ಗುರುಬಸವ ಸ್ವಾಮೀಜಿ

357

ಚಿಕ್ಕಮಗಳೂರು : ಸ್ವತಂತ್ರ ಧರ್ಮವಾಗುವುದಕ್ಕೆ ಇರಬೇಕಾದ ಎಲ್ಲಾ ರೀತಿಯ ಅರ್ಹತೆಗಳು ಲಿಂಗಾಯತ ಧರ್ಮಕ್ಕೆ ಇರುವುದರಿಂದ ಆ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ನೀಡಬೇಕು, ಅದಕ್ಕಾಗಿ ಬಸವ ಧರ್ಮೀಯರೆಲ್ಲರೂ ಹೋರಾಟ ನಡೆಸಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಕರೆ ನೀಡಿದರು. ನಗರದ ವಿರಕ್ತಮಠ ಬಸವಮಂದಿರದಲ್ಲಿ ಭಾನುವಾರ ನಡೆದ ಸ್ವತಂತ್ರ ಲಿಂಗಾಯತ ಧರ್ಮ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಹಿಂದೂ ಧರ್ಮ ಧರ್ಮವಲ್ಲ ಅದೊಂದು ಸಂಸ್ಕøತಿ, ವೀರಶೈವ ಧರ್ಮ ಹಿಂದೂ ಧರ್ಮವನ್ನು ಅವಲಂಬಿತವಾಗಿ ವೈದಿಕ ಮಾರ್ಗ ಮತ್ತು ಸಂಸ್ಕøತವನ್ನು ಅನುಸರಿಸುತ್ತಿರುವುದರಿಂದ ಲಿಂಗಾಯತರು ಆ ಎರಡೂ ಧರ್ಮಗಳಿಗೆ ಸೇರಿದವರಲ್ಲ ಈ ಹಿನ್ನೆಲೆಯಲ್ಲಿ ಹಿಂದೂಗಳೇ ಬೇರೆ ವೀರಶೈವರೇ ಬೇರೆ ಲಿಂಗಾಯಿತರೇ ಬೇರೆ ಎಂದು ಸ್ಪಷ್ಟಪಡಿಸಿದರು. ಭಕ್ತಿ ಭಂಡಾರಿ ಬಸವಣ್ಣನವರಿಂದ ಸ್ವತಂತ್ರ ಧರ್ಮವಾಗಿಯೇ ಸ್ಥಾಪನೆಯಾಗಿರುವಂತಹ ಲಿಂಗಾಯತ ಧರ್ಮದ ಅನುಯಾಯಿಗಳು ನಾವು ಎಂಬುದನ್ನು ಲಿಂಗಾಯತರು ಅರ್ಥಮಾಡಿಕೊಳ್ಳಬೇಕು, ದ್ವಂದ್ವವನ್ನು ಬಿಟ್ಟು ಆ ಧರ್ಮದ ಅಡಿಯಲ್ಲೇ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವುದಕ್ಕೆ ಪೇಜಾವರ ಶ್ರೀಗಳಿಗೆ ಯಾವುದೇ ನೈತಿಕತೆ ಇಲ್ಲ, ಮೊದಲು ಅವರ ಧರ್ಮವನ್ನು ಅವರು ಸರಿಪಡಿಸಲಿ ಹಿಂದೂ ಧರ್ಮದಲ್ಲಿರುವ ಮಡೆ ಸ್ನಾನದಂತಹ ಅವೈಜ್ಞಾನಿಕ ಪದ್ದತಿಗಳನ್ನು ನಿಲ್ಲಿಸಲಿ ಎಂದು ಸಲಹೆ ಮಾಡಿದ ಅವರು ಅಲ್ಲಿಯವರೆಗೂ ಲಿಂಗಾಯತ ಧರ್ಮದ ಬಗ್ಗೆ ಅವರು ಮಾತನಾಡಬಾರದು ಎಂದು ಹೇಳಿದರು. ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಕರಡಿಗವಿ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಲಿಂಗಾಯತರದು ಬಸವ ಧರ್ಮ, ಬಸವತತ್ವ ಅವರಿಗೆ ಯಾವುದೇ ಧರ್ಮದ ಹಂಗಿಲ್ಲ ಸರ್ವತಂತ್ರ ಸ್ವತಂತ್ರರಾದ ಅವರು ಬಸವ ಧರ್ಮದಡಿಯೇ ಸಾಗಬೇಕು ಎಂದು ತಿಳಿಸಿದರು.

ಜೈನ, ಬೌದ್ದ, ಸಿಖ್, ಕ್ರಿಶ್ಚಿಯನ್ ಸೇರಿದಂತೆ ಅನೇಕ ಧರ್ಮಗಳು ಸ್ವತಂತ್ರ ಧರ್ಮವಾಗಿರುವಾಗ ಲಿಂಗಾಯತ ಧರ್ಮವೇಕೆ ಸ್ವತಂತ್ರ ಧರ್ಮವಾಗಬಾರದು ಎಂದು ಪ್ರಶ್ನಿಸಿದ ಅವರು ಲಿಂಗಾಯತರ ಅಭಿವೃದ್ದಿಗಾಗಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಲೇ ಬೇಕು ಎಂದು ಪ್ರತಿಪಾದಿಸಿದರು. ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮದಲ್ಲಿ ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರೂ ಇರುವುದರಿಂದ ಅದು ವಿಶ್ವಧರ್ಮವಾಗಿದೆ ಎಂದರು.

ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಬಸವ ತತ್ವ ಪ್ರಚಾರಕ ಜಿ.ಎನ್.ಬಸವರಾಜಪ್ಪ, ಕಾಂತಪ್ಪ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಶೋಭಾ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು, ಮಂಜುನಾಥ್ ಸ್ವಾಗತಿಸಿದರು, ಜಯಚನ್ನೇಗೌಡ ವಂದಿಸಿದರು.

LEAVE A REPLY

Please enter your comment!
Please enter your name here