ಚಿಕ್ಕಮಗಳೂರು : ಸಫಾಯಿ ಕರ್ಮಚಾರಿಗಳ ಅಭ್ಯುದಯಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಸಮರ್ಪಕ ಬಳಕೆ ಮಾಡಿಕೊಳ್ಳುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್ ಕರೆ ನೀಡಿದರು.
ಅವರು ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಫಾಯಿ ಕರ್ಮಚಾರಿಗಳ, ಮ್ಯಾನುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ-೨೦೧೩ ರಡಿ ಸರ್ಕಾರದ ಕಾನೂನುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಲಹೋರುವಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸರ್ಕಾರ ೧೯೭೪ ರಲ್ಲಿಯೇ ಕಾನೂನು ಜಾರಿಗೆ ತಂದಿದೆ, ಆದರೂ ಸಹ ಈ ಪದ್ಧತಿ ಇಂದು ಕೂಡ ಜೀವಂತವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಇವುಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವೈಫಲ್ಯವೇ ಕಾರಣ ಎಂದರು. ಇಂತಹ ಅನಿಷ್ಟ ಪದ್ಧತಿಗಳು ಕೆಲವೇ ಜನರ ಹಿತಕ್ಕಾಗಿ ನಡೆಯುತ್ತಿವೆ ಎಂದ ಅವರು ಇವುಗಳ ಸಂಪೂರ್ಣ ನಿರ್ಮೂಲನೆಗೆ ತಾತ್ಸಾರ ಮನೋಭಾವವನ್ನು ಹೊಂದದೆ ಅಧಿಕಾರಿಗಳು ಮುಂದಾಗಬೇಕೆಂದರು.
ಆಧುನಿಕ ಯುಗದಲ್ಲಿ ಸ್ವಚ್ಛತೆಗೆ ಅನೇಕ ಯಂತ್ರೋಪಕರಣಗಳು ಈಗಾಗಲೇ ಇವೆ ಇವುಗಳ ಬಳಕೆ ಮಾಡಿಕೊಳ್ಳಬೇಕು, ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿ ಅಮಾನೀಯವಾಗಿರುವ ಇಂತಹ ಅನಿಷ್ಟ ಪದ್ಧತಿಗಳು ಸಂಪೂರ್ಣವಾಗಿ ನಿಲ್ಲಬೇಕು ಎಂದರು. ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಮಾತನಾಡಿ ೪೦ ವರ್ಷಗಳ ಹಿಂದೆಯೇ ಕಾನೂನು ಜಾರಿಗೆ ತಂದಿದ್ದರು ಆಚರಣೆಯಲ್ಲಿರುವುದು ದುಃಖಕರವಾದ ಸಂಗತಿ ಸಮಾಜದ ಎಲ್ಲಾ ವರ್ಗದವರು ಇವುಗಳ ನಿರ್ಮೂಲನೆಗೆ ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ ಸಫಾಯಿ ಕರ್ಮಚಾರಿಗಳು ತಾವು ಮಾಡುತ್ತಿರುವ ವೃತ್ತಿಯನ್ನು ತಮ್ಮ ಮಕ್ಕಳು ಅವುಗಳನ್ನು ಮುಂದುವರೆಸಿಕೊಂಡು ಹೋಗದಂತೆ ಎಚ್ಚರ ವಹಿಸಬೇಕು, ಸಫಾಯಿ ಕರ್ಮಚಾರಿಗಳ ಪುನರ್ವಸತಿಗೆ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಇವುಗಳ ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂದರು. ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಫಾಯಿ ಕರ್ಮಚಾರಿಗಳು ಉತ್ತಮ ಆರೋಗ್ಯವನ್ನು ಹೊಂದಿದಾಗ ಮಾತ್ರ ನಗರದ ಆರೋಗ್ಯ ಉತ್ತಮವಾಗಿರಲು ಸಾಧ್ಯ, ತಮ್ಮ ಕಾರ್ಯ ನಿರ್ವಹಿಸುವಾಗ ರಕ್ಷಣಾ ಸಾಮಾಗ್ರಿಗಳನ್ನು ತಪ್ಪದೇ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ಸದಸ್ಯೆ ಎಂ.ಪದ್ಮ ಪ್ರಾಸ್ತಾವಕವಾಗಿ ಮಾತನಾಡಿದರು. ರಾಜ್ಯ ಮ್ಯಾನುಯಲ್ ಸ್ಕ್ಯಾವೆಂಜರ್ ಮೇಲುಸ್ತುವಾರಿ ಸಮಿತಿ ಸದಸ್ಯ ಕೆ.ಬಿ. ಓಬಳೇಶ್ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ಡಾ|| ಆರ್.ವಿ. ಚಂದ್ರಶೇಖರ್ ಉಪನ್ಯಾಸ ನೀಡಿದರು. ಸಭೆಯಲ್ಲಿ ನಗರ ಸಭಾ ಸದಸ್ಯ ರಾಜಶೇಖರ್, ಜಿ.ಪಂ. ಉಪಕಾರ್ಯದರ್ಶಿ ರಾಜ್‌ಗೋಪಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.