- ರಾಘವೇಂದ್ರ ಕೆಸವಳಲು.
ಮೊನ್ನೆ ಇಂಗ್ಲೀಷ್ ದಿನ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸುವಾಗ ಕಂಡ ಮೀರತ್ ನ ಆರ್ಮಿ ಕಂಟೋನ್ಮೆಂಟ್ ಮೇಜರ್ ವಿವಾಹಿತ ನಿಖಿಲ್ ಹಾಂಡಾ ಎನ್ನುವ ವ್ಯಕ್ತಿ ಅದೇ ಕಂಟೋನ್ಮೆಂಟ್ ನ ಇನ್ನೋರ್ವ ಮೇಜರ್ ಅಮಿತ್ ದ್ವಿವೇದಿ ಎಂಬಾತನ 35 ವರ್ಷದ ಪತ್ನಿ ಶೈಲಜಾ ದ್ವಿವೇದಿಯನ್ನು ಕತ್ತು ಸೀಳಿ ಕೊಲೆಗೈದು ಸಾಕ್ಷಿ ನಾಶಕ್ಕಾಗಿ ಮೃತದೇಹವನ್ನು ವಿರೂಪಗೊಳಿಸಿದ ಘಟನೆ ಸುಶಿಕ್ಷಿತ ವಲಯವನ್ನು ಬೆಚ್ಚಿಬೀಳುವಂತೆ ಮಾಡಿದೆ. ಪೊಲೀಸರ ಪ್ರಾಥಮಿಕ ಹಂತದ ತನಿಖೆಯಿಂದ ನಿಖಿಲ್ ಹಾಂಡಾ ಹತ್ತಾರು ಫೇಕ್ ಫೇಸ್ ಬುಕ್ ಅಕೌಂಟ್ ಗಳನ್ನು ಹೊಂದಿರುವುದು ಹಾಗೂ ಬೇರೆ ಬೇರೆ ಹೆಸರಿನಿಂದ ಮಹಿಳೆಯರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಅದಲ್ಲದೇ ಈತ ಡೇಟಿಂಗ್ ಆಪ್ ಗಳ ಖಾಯಂ ಬಳಕೆದಾರನಾಗಿದ್ದು ಅಲ್ಲಿಯೂ ಕೂಡ ಸಾಕಷ್ಟು ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದನೆಂದು ತಿಳಿದುಬಂದಿದೆ.
ಆಧುನಿಕ ಜೀವನದ ಧಾವಂತದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿರುವ ಮೇಲ್ವರ್ಗದ ಜನರನ್ನು ಈ ಡೇಟಿಂಗ್ ಆಪ್ ಗಳು –“ಏಕಾಂಗಿಯಾಗಿದ್ದೀರಾ?” “ನೀವು ವಿಚ್ಛೇದಿತರೇ”? ಮುಂತಾದ ತಲೆ ಬರಹದೊಂದಿಗೆ ತನ್ನತ್ತ ಸೆಳೆದುಕೊಳ್ಳಲು ನಿಮ್ಮದೇ ವಲಯದಲ್ಲಿ ನೀವು ಸಂಬಂಧಗಳ ಸಫಲತೆಯನ್ನು ಪಡೆಯಲು ವಿಫಲರಾಗಿರುವುದರ ಲಾಭವನ್ನು ಪಡೆಯುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ತನ್ನ ಸಂಗಾತಿಯಿಂದ ಅಥವಾ ತಮ್ಮದೇ ಕುಟುಂಬ ವ್ಯವಸ್ಥೆಯಿಂದ ವಿಮುಖರಾಗಿರುವ ವ್ಯಕ್ತಿಗಳು ಸಾಕಷ್ಟು ಹಣವನ್ನು ಚೆಲ್ಲಿ ಈ ಆಪ್ ಗಳ ಮುಖಾಂತರ ದೇಶದ ಅಥವಾ ಪ್ರಪಂಚದ ಯಾವುದೋ ಭಾಗದ ಅಪರಿಚಿತ ವ್ಯಕ್ತಿಯೊಂದಿಗೆ ಡೇಟ್ ಮಾಡುತ್ತಾ ಅದನ್ನೇ ಭದ್ರವಾದ ಸಾಂಗತ್ಯವೆಂದು ಭ್ರಮಿಸುತ್ತಾ ಕೊನೆಗೆ ಮಾನಸಿಕ ಖಿನ್ನತೆಯನ್ನು ಬಳುವಳಿಯಾಗಿಸಿಕೊಂಡು ನರಳುತ್ತಿದ್ದಾರೆ. ಹಲವು ಬಾರಿ ಕ್ಷಣಿಕ ಸುಖದ ಗೀಳು ಹತ್ತಿಸಿಕೊಂಡು ನಂತರ ಮನೋವಿಕಾರಗಳಿಗೆ ತುತ್ತಾಗುವ ಇವರು ನಿಖಿಲ್ ಹಾಂಡಾನಂತಹ ಅಪಾಯಕಾರಿ ವ್ಯಕ್ತಿಗಳಾಗಿ ಪರಿಣಮಿಸುತ್ತಿದ್ದಾರೆ.
ಸಂಬಂಧಗಳ ಗಟ್ಟಿತನದೊಂದಿಗೆ ಪರಸ್ಪರ ತ್ಯಾಗ ಮತ್ತು ಹೊಂದಾಣಿಕೆಯಿಂದ ಮೈಮನಗಳನ್ನು ಅರಳಿಸುತ್ತಿದ್ದ ಲೈಂಗಿಕತೆ ಇಂದು ವ್ಯಾಪಾರದ ಸರಕಾಗಿದೆ.ಇದನ್ನೇ ವೈಭವೀಕರಿಸುತ್ತಿರುವ ಡೇಟಿಂಗ್ ಆಪ್ ಗಳ ಜಾಹೀರಾತುಗಳಿಗೆ ಮರುಳಾಗದೆ ಸಮಾಜ ನಿರ್ಮಾಣದ ಬಹುಪಾಲು ಜವಬ್ದಾರಿ ಹೊಂದಿರುವ ಸುಶಿಕ್ಷಿತ ವಲಯ ತಮ್ಮದೇ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಹಳಷ್ಟಿದೆ.