ಹಾಸನ : ಚನ್ನರಾಯಪಟ್ಟಣ ಮತ್ತು ಜಿಲ್ಲೆಯ ವಿವಿಧ ಭಾಗಗಳ ಕೈಗಾರಿಕಾ ವಸಾಹತುವಿನಲ್ಲಿ ಮೂಲಭೂತ ಸೌಕರ್ಯಗಳಾದ ಬೀದಿ ದೀಪ, ರಸ್ತೆ, ಕಾಂಪೌಂಡ್, ಇತ್ಯಾದಿ ಸೌಲಭ್ಯವನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಕೈಗಾರಿಕಾ ಸ್ಪಂದನ ಕಾರ್ಯಕ್ರಮ-2017 ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೈಗಾರಿಕಾ ವಸಾಹತುವಿನಲ್ಲಿ ಪದೇಪದೇ ವಿದ್ಯುತ್ ನಿಲುಗಡೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಮಾಹಿತಿ ಮೇರೆಗೆ ಅವರು ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆ ಕೈಗಾರಿಕಾ ಅಭಿವೃದ್ದಿ ಕೇಂದ್ರ ಒಟ್ಟು 2446.53 ಎಕರೆ ಭೂಮಿಯನ್ನು ಅಭಿವೃದ್ಧಿ ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟೆಕ್ಸ್‍ಟೈಲ್ ಆಧಾರಿತ ಕೈಗಾರಿಕೆಗಳಿವೆ ಅಂದಾಜು 10000 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೈಗಾರಿಕೆ ಮತ್ತು ಕಾರ್ಮಿಕರ ರಕ್ಷಣೆ ದೃಷ್ಠಿಯಿಂದ ಉಪ ಆರಕ್ಷಕ ಠಾಣೆಯನ್ನು ಕೈಗಾರಿಕಾ ಬೆಳವಣಿಗೆ ಕೇಂದ್ರದಲ್ಲಿ ಸ್ಥಾಪಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಮಟ್ಟದ ಉನ್ನತಾಧಿಕಾರದ ಏಕ ಗವಾಕ್ಷಿ ಸಮಿತಿಯ ಸಭೆಯ ವಿಷಯ ಸೂಚಿ ಮತ್ತು ಟಿಪ್ಪಣಿ ಯ ಬಗ್ಗೆ ಚರ್ಚೆ ನಡೆಯಿತು.
ಅತಿ ಸಣ್ಣ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಲು 85 ಯೋಜನೆಗಳಿಗೆ ಸಂಬಂಧಪಟ್ಟಂತೆ ನಿವೇಶನ ಹಂಚಿಕೆ ಮಾಡಲಾಗಿದೆ. ಕೇವಲ 56 ಉದ್ದಿಮೆದಾರರು ಮಾತ್ರ ನಿವೇಶನದ ಮೊಬಲಗನ್ನು ಪಾವತಿಸಿದ್ದಾರೆ. ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಎಂದು ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗವನ್ನು ನೀಡುವ ಡಾ. ಸರೋಜಿನಿ ಮಹಿಷಿ ವರದಿಯ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಯಾದ ಕೆ.ಎಂ ಜಾನಕಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ವಿ.ಎಸ್.ಹೆಗಡೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕ ನಿರ್ದೇಶಕರಾದ ಎಚ್. ಪ್ರಕಾಶ್, ಹಾಗೂ ಸಂಫ ಸಂಸ್ಥೆಗಳ ಅಧಿಕಾರಿಗಳು, ಉದ್ಯಮಿದಾರರು, ಅಧಿಕಾರಿಗಳು ಹಾಜರಿದ್ದದು.