ಬೆಂಗಳೂರು: ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತು ಯಲಹಂಕ ವಾಯ್ಸ್ ಪತ್ರಿಕೆ ಸಂಪಾದಕ ಅನಿಲ್ ರಾಜ್ ಅವರು ಕರ್ನಾಟಕ ವಿಧಾನ ಸಭೆ ನೀಡಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕರಾದ ಕೆ.ಬಿ.ಕೋಳಿವಾಡ ಮತ್ತು ಎಸ್.ಆರ್.ವಿಶ್ವನಾಥ್ ಅವರ ವಿರುದ್ಧ ಮಾನಹಾನಿ ಮತ್ತು ಸುಳ್ಳು ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ಈ ಇಬ್ಬರು ಪತ್ರಕರ್ತರು ಒಂದು ವರ್ಷ ಜೈಲು ಶಿಕ್ಷೆ ಮತ್ತು 10,000 ದಂಡ ಕಟ್ಟುವಂತೆ ಆದೇಶಿಸಿತ್ತು.
ಕರ್ನಾಟಕ ವಿಧಾನಸಭೆಯ ನಿರ್ಣಯ ಅಸಂವಿಧಾನಿಕವಾಗಿದೆ ಎಂದು ಉಲ್ಲೇಖಿಸಿ ಪತ್ರಕರ್ತರ ಪರ ವಕೀಲರಾದ ಶಂಕರಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಜೈಲು ಶಿಕ್ಷೆ ವಿಧಿಸುವ ಅಧಿಕಾರ ಕರ್ನಾಟಕ ವಿಧಾನಸಭೆಗೆ ಇಲ್ಲ ಎಂದು ಪತ್ರಕರ್ತರು ಅರ್ಜಿಯಲ್ಲಿ ವಾದಿಸಿದ್ದಾರೆ. ಕಳೆದ ಜೂನ್ 21ರಂದು ಈ ಇಬ್ಬರು ಪತ್ರಕರ್ತರ ವಿರುದ್ಧ ಶಿಕ್ಷೆ ನೀಡಿ ಕರ್ನಾಟಕ ವಿಧಾನಸಭೆ ನಿರ್ಣಯ ಹೊರಡಿಸಿತ್ತು.ನಂತರ ಇಬ್ಬರೂ ಪತ್ರಕರ್ತರು ಕೋರ್ಟ್ ಮೊರೆ ಹೋದಾಗ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಕೋರ್ಟ್ ಸಲಹೆ ನೀಡಿತ್ತು.
ವಿಧಾನಸಭಾಧ್ಯಕ್ಷರ ಎದುರು ಹಾಜರಾಗದ ಹೊರತು ಪತ್ರಕರ್ತರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲರು ಹೇಳಿದ್ದರು. ಈ ಸಂಬಂಧ ಪತ್ರಕರ್ತರು ವಿಧಾನಸಭಾಧ್ಯಕ್ಷರ ಎದುರು ಅರ್ಜಿ ಸಲ್ಲಿಸಿದ್ದರು. ಆದರೆ ಕರ್ನಾಟಕ ವಿಧಾನಸಭೆ ಈಗಾಗಲೇ ಪತ್ರಕರ್ತರಿಗೆ ಶಿಕ್ಷೆ ನೀಡುವುದಾಗಿ ನಿಶ್ಚಯಿಸಿದೆ. ಹೀಗಾಗಿ ಇಬ್ಬರು ಪತ್ರಕರ್ತರು ಮತ್ತೆ ನಿನ್ನೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.