ಹಾಸನ : ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯದ ನಾಯಕನಾಗಿರದೆ ಇಡೀ ಸಮಾಜಕ್ಕೆ ದಾರಿ ದೀಪವಾಗಿದ್ದಾರೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿಚರಾದ ಎ.ಮಂಜು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲಾಡಳತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ (ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಶತಶತಮಾನಗಳ ಹಿಂದೆಯೇ ರಾಮಾಯಣದಿಂದ ಜೀವನಾದರ್ಶ, ಮೌಲ್ಯಗಳನ್ನು ಸಾರುವ ಕೃತಿ ರಚಿಸುವ ಮೂಲಕ ನಮ್ಮೆಲ್ಲರಿಗೂ ನೈತಿಕ ಪ್ರಜ್ಞೆಯನ್ನು ಮೂಡಿಸಿ ಮಾನವಧರ್ಮದ ಬಗ್ಗೆ ತಿಳಿಸಿದ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದ ಅವರು ಕಟುಕ ಬುದ್ದಿಯ ಬಿಟ್ಟು ದಿವ್ಯಜ್ಞಾನ ಸಂಪಾದಿಸಿದ ವಾಲ್ಮೀಕಿ ಹಿಂಸೆಯ, ವೇದನೆಯ, ಪ್ರೀತಿಯ, ನೆಮ್ಮದಿಯ ಬಗ್ಗೆ ತಿಳಿಸಿದ್ದಾರೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು. ರಾಜ್ಯಸರ್ಕಾರ ಪರಿಶಿಷ್ಟ ಪಂಗಡದವರ ಶ್ರೇಯೊಭಿವೃದ್ಧಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ಸಮುದಾಯದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ವೃದ್ದಿಗೆ ಆಧ್ಯತೆ ನೀಡಿದೆ ಅದನ್ನು ಸದುಪಯೋಗ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಶಾಸಕ ಹೆಚ್.ಎಸ್. ಪ್ರಕಾಸ್ ಅವರು ಮಾತನಾಡಿ ವಾಲ್ಮೀಕಿ ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ದಾರ್ಶನಿಕ ನಮ್ಮಲಿರುವ ಅಸಮಾನತೆಗಳು ಕಡಿಮೆಯಾಗಬೇಕು, ನಾವು ನಮ್ಮ ತಪ್ಪನ್ನು ಅರಿತು ಪರಿವರ್ತನೆಯಾದರೆ ಆಮೂಲಕ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು. ಶೋಷಿತ ಸಮುದಾಯಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಸಮಾಜ ಮುಖಿಗಳನ್ನಾಗಿಸಲು ಶ್ರಮಿಸಬೇಕು ಎಲ್ಲರೂ ರಾಮಾಯಣದಲ್ಲಿರುವ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಕುಮಾರ್ ಅವರು ಮಾತನಾಡಿ ಶೋಷಿತ, ನಿರ್ಲಕ್ಷಿತ ಸಮುದಾಯದಿಂದ ಬಂದ ವಾಲ್ಮೀಕಿ, ಅಂಬೇಡ್ಕರ್, ವ್ಯಾಸ ಮತ್ತಿತರರು ಇಡೀ ಸಮುದಯಕ್ಕೆ ದಾರಿ ದೀಪವಾಗಿದ್ದಾರೆ. ಸಮಾಜದಲ್ಲಿರುವ ವರ್ಗ ತಾರತಮ್ಯ ನಿವಾರಣೆಯಾಗಬೇಕು ರಾಜ್ಯ ಸರ್ಕಾರ ಇಂತಹ ಮಹಾನ್ ನಾಯಕರ ಜನ್ಮ ಜಯಂತಿ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ವಿಶೇಷ ಉಪನ್ಯಾಸ ನೀಡಿದ ಎ.ವಿ.ಕೆ. ಕಾಲೇಜು ಕನ್ನಡ ಉಪನ್ಯಾಸಕರಾದ ಡಾ.ಯತೀಶ್ವರ್ ಅವರು ಮಹರ್ಷಿ ವಾಲ್ಮೀಕಿಯವರ ಬದುಕು, ಬರಹ, ಚಿತಂನೆ, ಆದರ್ಶಗಳ ಬಗ್ಗೆ ಪರಿಚಯ ಮಾಡಿಕೊಟ್ಟು, ಸರ್ಕಾರ ಶೋಷಿತ ವರ್ಗದ ಮಕ್ಕಳಿಗೆ ಮಾಡಿರುವ ಪ್ರೊತ್ಸಾಹಧನ ಕುರಿತ ಯೋಜನೆ ಬಗ್ಗೆ ವಿವರಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತ್ತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಸತೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ ಸಾರಥಿಯಾದ ಸಚಿವರು: ಹಾಸನ ಜಿಲ್ಲಾಧಿಕಾರಿ ಕಚೇರಿ ಅವರಣದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಾಲ್ಮೀಕಿಯವರ ಭಾವಚಿತ್ರ ಇರಿಸಿದ್ದ ಬೆಳ್ಳಿರಥವನ್ನು ತಾವೇ ಚಾಲನೆ ಮಾಡಿದರು. ಶಾಸಕರಾದ ಹೆಚ್.ಎಸ್.ಪ್ರಕಾಶ್, ಸ್ವತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ ಅವರು ರಥದಲ್ಲಿ ಸಹ ಪ್ರಯಾಣ ಮಾಡಿದರು.
ನಗರಸಭೆ ಅಧ್ಯಕ್ಷರಾದ ಡಾ//ಹೆಚ್.ಎಸ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಕೆ.ಎಂ.ಜಾನಕಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರ್ ಮತ್ತಿತರರು ಹಾಜರಿದ್ದರು.