ಮೂಡಿಗೆರೆ : ಪಕ್ಷ ಅಧಿಕಾರಕ್ಕೆ ಬಂದರೆ ಒಂದು ದಲಿತರಿಗೆ ಮತ್ತೊಂದು ಅಲ್ಪಸಂಖ್ಯಾತರಿಗೆಂದೇ ಎರಡು ಡಿಸಿಎಂ ಹುದ್ದೆ ಸೃಷ್ಟಿಸೋದಾಗಿ ಹೇಳಿರೋ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಜೆಡಿಎಸ್ ವಲಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ. ಜೆಡಿಎಸ್‍ನ ದಲಿತ ಹಾಗೂ ಅಲ್ಪಸಂಖ್ಯಾತ ಹಾಲಿ ಹಾಗೂ ಮಾಜಿ ಶಾಸಕರು ಗೆಲುವಿಗಾಗಿ ಇಲ್ಲದ ಕಸರತ್ತು ನಡೆಸುತ್ತಿರೋದ್ರಲ್ಲಿ ಎರಡು ಮಾತಿಲ್ಲ. ಈ ಹೇಳಿಕೆ ಹಿಂದೆ ಕುಮಾರಸ್ವಾಮಿಯವರ ರಾಜಕೀಯ ಲೆಕ್ಕಾಚಾರ ಏನೇ ಇರಬಹುದು. ಆದರೆ, ದಲಿತ ಹಾಗೂ ಅಲ್ಪಸಂಖ್ಯಾತರ ಮನದಲ್ಲಿ ನಾನು ಡಿಸಿಎಂ ಆಗಬಹುದು ಎಂದೆನಿಸುತ್ತಿದ್ರೆ, ಮತದಾರರ ಮನದಲ್ಲೂ ಕೂಡ ಮತಕ್ಕಾಗಿ ನಮ್ಮನ್ನ ಬಳಸಿಕೊಳ್ಳುವವರ ಮಧ್ಯೆ ಕುಮಾರಸ್ವಾಮಿ ನಮನ್ನೂ ಎಲ್ಲರಂತೆ ನೋಡುತ್ತಿದ್ದಾರೆ, ಅವರಿಗೂ ಒಂದು ಅವಕಾಶ ನೀಡೋಣ ಅಂತಿದ್ದಾರೆ.
ಕುಮಾರಸ್ವಾಮಿ ಹೇಳಿದ ಆ ದಲಿತ ನಾಯಕರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಬಿ.ನಿಂಗಯ್ಯ ಕೂಡ ಒಬ್ರು. ಬಿ.ಬಿ.ನಿಂಗಯ್ಯನವರು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳುವುದಕ್ಕಿಂತ ಅವರಿಗೆ ಆ ಯೋಗ್ಯತೆ ಇದೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಯಾಕಂದ್ರೆ, ವೃತ್ತಿಯಲ್ಲಿ ರಾಜಕೀಯ ಹೊರತುಪಡಿಸಿದ್ರೆ ಅವರೊಬ್ರು ಉಪನ್ಯಾಸಕ. ಬುದ್ಧಿವಂತ. ವಾಗ್ಮಿ. ತಳಮಟ್ಟದಿಂದ ಬೆಳೆದು ಸಮಾಜದ ಎಲ್ಲಾ ವರ್ಗದ ಜನರ ಸಮಸ್ಯೆಯನ್ನ ಹತ್ತಿರದಿಂದ ಕಂಡು, ಅನುಭವಿಸಿ ಸಚಿವಸ್ಥಾನದಕ್ಕೇರಿದ ನಾಯಕ. ಇವರಿಗೆ ಸಮಾಜವನ್ನ ಸ್ವಾಸ್ಥ್ಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮಥ್ರ್ಯವಿದೆ.
ಇವರ ಯೋಚನಾಲಹರಿ, ತಾಳ್ಮೆ, ಬುದ್ಧಿವಂತಿಕೆ, ಸಮಾಜದ ಮೇಲಿದ್ದ ಕಾಳಜಿಗೆ 1988ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ರು ತೋಟಗಾರಿಕೆ ಸಚಿವರಾಗಿ ತಮ್ಮ ಹುದ್ದೆಯನ್ನ ಸಮರ್ಥವಾಗಿ ನಿಭಾಯಿಸಿದ್ದರು. ಹೊಸ ಅನುಭವದ ಮಧ್ಯೆಯೂ ಮಾಡಿದ ಕೆಲಸ 1994ರಲ್ಲಿ ಹೆಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾದಾಗ ಪುನಃ ಕೃಷಿ ಮಾರುಕಟ್ಟೆ ಸಚಿವರಾಗಿ ದೇವೇಗೌಡರ ಮನಗೆದ್ದಿದ್ರು. ನಿಂಗಯ್ಯನವರ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅದೇ ನಂಟು ಇಂದಿಗೂ ಹಾಗೇ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ, ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಿಂಗಯ್ಯ ಮತ್ತೊಮ್ಮೆ ಪಶುಸಂಗೋಪನಾ ಸಚಿವರಾಗಿ ಸಾಕಷ್ಟು ರಾಜಕೀಯ ಅನುಭವ ಪಡೆದಿದ್ದಾರೆ.
ಅಂದಿನಿಂದ ಇಂದಿನವರೆಗೂ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ, ರಾಜ್ಯ ಹಿರಿಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ಶಾಸಕರಾಗಿರೋ ಇವರು, ಸೋಲಲಿ-ಗೆಲ್ಲಲ್ಲಿ ಮಲೆನಾಡಿನಲ್ಲಿ ಜೆಡಿಎಸ್‍ನ ಸಾರಥಿಯಾಗಿರೋ ಇವರಿಗೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಡಿಸಿಎಂ ಹುದ್ದೆ ಸಿಗಲಿ ಅನ್ನೋದು ಮೂಡಿಗೆರೆ ಜನರ ಸ್ವಾರ್ಥವಲ್ಲ. ಬದಲಿಗೆ ಸಮಾಜದ ಅಂಕುಡೊಂಕನ್ನ ತಿದ್ದುತ್ತಾ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನ ನೀಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುತ್ತಾರೆಂಬ ನಂಬಿಕೆಯಷ್ಟೆ.