ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 500 ಹಾಗೂ 1000 ಮುಖಬೆಲೆಯನ್ನು ಬ್ಯಾನ್ ಮಾಡಿ ಇಂದಿಗೆ ವರ್ಷ ಕಳೆದಿದ್ದು, ಅದರ ವಿರುದ್ದ ದೇಶದ್ಯಾಂತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿರುವ ಕರಾಳ ದಿನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ನೋಟ್ ಬ್ಯಾನ್ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಜನರ ಬದುಕಿಗೆ ಕುತ್ತು ತಂದ ಮೋದಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ, ತಾಲೂಕು ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟು, ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜನರಿಗೆ ಸಹಾಯ ಮಾಡಬೇಕಾದ ಮೋದಿ ಸರ್ಕಾರ ಜನವಿರೋಧಿ ಕಾರ್ಯವನ್ನು ಮಾಡುತ್ತಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಕೂಡಾ ಹದಗೆಟ್ಟಿದೆ, ರೈತರ ಬಗ್ಗೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಜಿಎಸ್ ಟಿ ಸೇರಿದಂತೆ ಇತರೆ ಯೋಜನೆಯಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ ಮೋಟಮ್ಮ, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಇಂತಹ ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿರಲಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಬಿದರಹಳ್ಳಿ ಜಯರಾಂ, ಮುಖಂಡರಾದ ನಾಗರತ್ನ, ಚಿಕ್ಕಹಳ್ಳ ಶಂಕರ್, ಮಹಮ್ಮದ್ ಇರ್ಷಾದ್, ಮಹಮ್ಮದ್ ಬಾವು, ಯೂತ್ ಕಾಂಗ್ರೆಸ್ ನ ಅಭಿಜಿತ್ ಸೇರಿದಂತೆ ಇತರರು ಭಾಗವಹಿಸಿದರು.