ಚಿಕ್ಕಮಗಳೂರು : ಶುಕ್ರವಾರ ಹಬ್ಬ. ಶನಿವಾರ-ಭಾನುವಾರ ವೀಕೆಂಡ್. ಸೋಮವಾರ ಗಾಂಧಿಜಯಂತಿ. ಸಾಲು-ಸಾಲು ಸರ್ಕಾರಿ ರಜೆ ಪ್ರವಾಸಿಗರಿಗೆ ಭರಪೂರ ಮನರಂಜನೆ. ಹೌದು, ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಶೃಂಗೇರಿ, ಹೊರನಾಡು, ದತ್ತಪೀಠ, ಕೆಮ್ಮಣ್ಣುಗುಂಡಿ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಸಾವಿರಾರು ಪ್ರವಾಸಿಗರು ಜಮಾಯಿಸಿ, ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಸವಿದಿದ್ದಾರೆ.
ಸಾಲು-ಸಾಲು ರಜೆ ಇದ್ದಿದ್ರಿಂದ ಹೊರ ರಾಜ್ಯ ಸೇರಿದಂತೆ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಬಂದ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಮೋಜು ಮಸ್ತಿಯಲ್ಲಿ ಮೈಮರೆತಿದ್ದಾರೆ. ಗಿರಿಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಯ ನಡುವೆ ಬೆಟ್ಟಗುಡ್ಡಗಳ ಮಧ್ಯೆ ಹಾದು ಹೋಗುವಾಗ ಮೋಡಗಳ ಕಣ್ಣಾಮುಚ್ಚಾಲೆ ಆಟ ಕಂಡು ಪುಳಕಿತರಾಗಿದ್ದಾರೆ. ಆದ್ರೆ, ಈ ಸುಂದರ ತಾಣದ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರವಾಸಿಗ್ರು ಕಿಡಿ ಕಾರಿದ್ದಾರೆ. ನಾಮಫಲಕ ಹಾಗೂ ತಡೆಗೋಡೆ ಇಲ್ಲದಿರೋದು, ರಸ್ತೆಗಳ ಅವ್ಯವಸ್ಥೆ ಕಂಡು ಸರ್ಕಾರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿರಿಗೆ ಬಂದ ಪ್ರವಾಸಿರ ಸಂಖ್ಯೆ 25 ಸಾವಿರಕ್ಕೂ ಅಧಿಕವಿದ್ರೆ, ಜಿಲ್ಲೆಯ ಧಾರ್ಮಿಕ ಕ್ಷೇತ್ರ ಹೊರನಾಡು, ಶೃಂಗೇರಿ ಹಾಗೂ ಕಳಸೇಶ್ವರನ ಸನ್ನಿಗೆ ಬಂದ ಪ್ರವಾಸಿಗರು 50 ಸಾವಿರಕ್ಕೂ ಅಧಿಕವಿದ್ದಾರೆ. ಕಾಂಕ್ರೀಟ್ ಕಾಡಿನ ಬದುಕಲ್ಲಿ ರೋಸಿಯೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ವಿಶಿಷ್ಟ ಅನುಭವ ನೀಡಿದೆ. ಪ್ರವಾಸಿಗರ ದಂಡನ್ನ ಕಂಡ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ಸಾಕಷ್ಟು ಹಣವನ್ನೂ ಕಿತ್ತಿದ್ದಾರೆ.
ಆದ್ರೆ, ಒಟ್ಟು ಗಿರಿಭಾಗಕ್ಕೆ ಬಂದ 10-12 ಸಾವಿರ ವಾಹನಗಳನ್ನ ಕಂಟ್ರೋಲ್ ಮಾಡುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಜಾಗ ಸಿಗದ ಕಾರಣ ಎಷ್ಟೋ ಪ್ರವಾಸಿಗರು ಕಾರಲ್ಲೆ ಮಲಗಿ ರಾತ್ರಿ ಕಳೆದಿದ್ದಾರೆ. ಆದ್ರೆ, ಚಿಕ್ಕಮಗಳೂರು ಪ್ರವಾಸೋಧ್ಯಮ ಜಿಲ್ಲೆ ಅನ್ನೋ ಸರ್ಕಾರ ಇಲ್ಲಿ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸದ ಬಗ್ಗೆ ಬಂದಂತಹಾ ಪ್ರವಾಸಿಗರು ಸರ್ಕಾರಕ್ಕೇ ಛೀಮಾರಿ ಹಾಕಿದ್ದೆ ಹೆಚ್ಚು.