ಮೂಡಿಗೆರೆ : ಮಾಜಿ ಪ್ರಧಾನಿ ದೇವೇಗೌಡರಷ್ಟು ಹಿಂದೂ ಧರ್ಮದ ಆಚಾರ-ವಿಚಾರ, ರೂಡಿ-ಸಂಪ್ರದಾಯಗಳನ್ನ ಉಳಿಸಿ-ಬೆಳೆಸಿಕೊಂಡು ಬರುತ್ತಿರೋರು ರಾಜ್ಯದಲ್ಲಿ ಮತ್ಯಾರೂ ಇಲ್ಲ ಎಂದು ಜೆಡಿಎಸ್ ಯುವ ಮುಖಂಡ ವಿನಯ್‍ರಾಜ್ ಹೇಳಿದ್ದಾರೆ. ಮೂಡಿಗೆರೆಯಲ್ಲಿ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ವಿನಯ್‍ರಾಜ್, ಬಿಜೆಪಿಯವ್ರು ನಾವು ಹಿಂದೂ ಧರ್ಮದ ರಕ್ಷಕರು, ಹಿಂದುತ್ವ ನಮ್ಮ ರಕ್ತ-ಉಸಿರು ಅಂದೆಲ್ಲಾ ಹೇಳುತ್ತಾರೆ. ಆದರೆ, ಅವರ ಹಿಂದುತ್ವದ ಪ್ರೀತಿ ಹಿಂದೆ ಅಧಿಕಾರದ ಆಸೆ ಅಡಗಿದ್ಯೋ ವಿನಃ ಮತ್ತಿನ್ನೇನೂ ಅಲ್ಲ. ಧರ್ಮದ ಹೆಸರಲ್ಲಿ ರಾಜಕೀಯ ಮಾಡೋ ಅವರಿಗೆ ಏನ್ ಹೇಳಬೇಕೋ ಗೊತ್ತಿಲ್ಲ ಎಂದು ವಿನಯ್‍ರಾಜ್ ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಧರ್ಮದ ಹೆಸರಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆದರೆ, ಅದು ಅಸಾಧ್ಯದ ಮಾತು. ಯಾಕೆಂದರೆ, ರಾಜ್ಯದ ಜನರೇನು ದಡ್ಡರಲ್ಲ. ಯಾರೂ ಒಳ್ಳೆಯವರು, ಯಾರೂ ಕೆಟ್ಟವರು ಎಂದು ಅವರಿಗೂ ಗೊತ್ತಿದೆ. ಈ ರಾಜ್ಯದ ಜನ ಮಾತಿನಲ್ಲಿ ಕೆಲಸ ಮಾಡಿರೋರನ್ನೂ ನೋಡಿದ್ದಾರೆ. ಕೈನಲ್ಲಿ ಕೆಲಸ ಮಾಡಿರೋರನ್ನೂ ನೋಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯವರು ತಿಳಿದಿದ್ದರೆ ಅದು ಅವರ ತಪ್ಪು ಕಲ್ಪನೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡೋರನ್ನ ಈ ರಾಜ್ಯದ ಜನ ಒಪ್ಪುವುದಿಲ್ಲ. ಏಕೆಂದರೆ, ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ. ಅಂತದ್ರಲ್ಲಿ ವಿಷ ಕುಡಿದ ಮಕ್ಕಳು ಬದುಕ್ತಾವಾ ಎಂದರು. ಈ ರಾಜ್ಯದ ಜನ ಐದು ವರ್ಷ ಬಿಜೆಪಿ ಪೂರ್ಣ ಅಧಿಕಾರ ಕೊಟ್ಟು ನೋಡಿದ್ದಾರೆ. ಕಾಂಗ್ರೆಸ್‍ಗೂ ಐದು ವರ್ಷ ಪೂರ್ಣ ಅಧಿಕಾರ ಕೊಟ್ಟು ನೋಡಿದ್ದಾರೆ. ಎರಡೂ ಪಕ್ಷಗಳ ಅಭಿವೃದ್ಧಿ-ಹಾರಾಟವನ್ನೆಲ್ಲಾ ಹತ್ತಿರದಿಂದ ಗಮನಿಸಿದ್ದಾರೆ. ರಾಜ್ಯ ಅಭಿವೃದ್ಧಿಯಾಗಬೇಕೆಂದರೆ ಸ್ಥಳಿಯ ಪಕ್ಷ ಅಧಿಕಾರಕ್ಕೆ ಬಂದರಷ್ಟೆ ಸಾಧ್ಯ ಎಂಬುದು ರಾಜ್ಯದ ಜನರಿಗೂ ಅರಿವಾಗಿದೆ. ಅದಕ್ಕೆ ಕುಮಾರಣ್ಣನ ಕುಮಾರ ಪರ್ವ ರ್ಯಾಲಿಗೆ ಸಿಕ್ತಿರೋ ಸ್ಪಂದನೆಯೇ ಸಾಕ್ಷಿ. ಅನುಮಾನವೇ ಬೇಡ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರ ಆಶೀರ್ವಾದಿಂದ ಕುಮಾರಣ್ಣನೇ ಸಿಎಂ ಆಗೋದು, ಅದು ವಿಧಿ ಲಿಖಿತ, ಅದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.