ಹಾಸನ : ವ್ಯವಸಾಯದ ಜೊತೆಗೆ ಉಪಕಸುಬುಗಳು ಇದ್ದಾಗ ಮಾತ್ರ ರೈತರ ಜೀವನ ಹಸನಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೋರಮಂಗಲದಲ್ಲಿ ಪಶು ಸಂಗೋಪನ ಪಾಲಿಟೆಕ್ನಿಕ್ ಕೃಷಿ ಕಾಲೇಜು ಉದ್ಘಾಟಿಸಿ ಮಾತನಾಡಿ ಅವರು ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ದೊರಕಿಸಿ ಕೊಡುವ ದೃಷ್ಟಿಯಿಂದ ಕುರಿ ಮೇಕೆಗಳ ಕೃತಕ ವಿರ್ಯಬ್ಯಾಂಕ್, ತಳಿಸುವರ್ಧನಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಸರಿಯಾಗಿ ಸಂಸ್ಕರಿಸಲಾದ ಮಾಂಸ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎ.ಪಿ.ಎಂ.ಸಿಗಳಲ್ಲಿ ಕುರಿಗಳ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ ಇದು ಶ್ಲಾಗನೀಯವಾದ ಕಾರ್ಯ ಎಂದು ಸಚಿವ ಹೆಚ್.ಎಂ.ರೇವಣ್ಣ ಹೇಳಿದರು.
ಪಶು ಸಂಗೋಪನಾ ಪಾಲಿಟೆಕ್ನಿಕ್‍ಗಳ ಪ್ರಾರಂಭದಿಂದ ಉದ್ಯೋಗವಾಕಾಶ ಹಾಗೂ ಪಶು ಉತ್ಪನ್ನಹಳ ಮಾರುಕಟ್ಟೆ ವಿಸ್ತರಣೆಗೆ ಅವಕಾಶಗಳು ಹೆಚ್ಚುವಂತೆ ಮಾಡಿದೆ. ಈ ವರೆಗೆ ಕೇವಲ ಎರಡು ಪಾಲಿಟೆಕ್ನಿಕ್‍ಗಳು ರಾಜ್ಯದಲ್ಲಿದ್ದವು ಅದರ ಸಂಖ್ಯೆಯನ್ನು ಐದಕ್ಕೆ ಏರಿಕೆ ಮಾಡಿರುವುದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರೆಷ್ಮೇ ಮತ್ತು ಪಶು ಸಂಗೋಪನಾ ಸಚಿವರಾದ ಎ.ಮಂಜು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎಂ.ಎಫ್‍ನಂತೆ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಒಕ್ಕೂಟ ಪ್ರಾರಂಭಕ್ಕೆ ಚಾಲನೆ ನೀಡಿರುವುದು ಅಭಿನಂದನಾರ್ಹ ಇದರಿಂದ ಗ್ರಾಮೀಣ ಭಾಗದ ರೈತಾಪಿ ವರ್ಗದವರಿಗೆ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ನೆರವು ದೊರೆಯಲಿದೆ ಮಾರುಕಟ್ಟೆ ಅಭಿವೃದ್ಧಿ ವಿಸ್ತರಣೆಗೆ ಸಾಧ್ಯವಾಗುತ್ತದೆ ಎಂದರು. ಮೂಕ ಪ್ರಾಣಿಗಳ ಸೇವೆಯನ್ನು ಮಾನವೀಯ ಮೌಲ್ಯವನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಚಿವರು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಾಸನ, ಚಾಮರಜನಗರ ಮತ್ತು ಯಾದಗಿರಿ ಮೂರು ಜಿಲ್ಲೆಗಳಲ್ಲಿ ಪಶು ಸಂಗೋಪನ ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಲಾಗಿದ್ದು ರೈತರಿಗೆ ಅನುಕೂಲವಾಗುವಂತೆ ಉತ್ತಮ ವೈದ್ಯರು ಮತ್ತ ಸಹಾಯಕ ವೈದ್ಯರನ್ನು ಸೃಷ್ಟಿ ಮಾಡುವುದು ಇದರ ಮುಖ್ಯ ಉದೇಶವಾಗಿದೆ ಎಂದು ಹೇಳಿದರು.
ಇತ್ತಿಚಿನ ದಿನಗಳಲ್ಲಿ ರೈತರಿಗೆ ರೇಷ್ಮೆ ಮತ್ತು ಪಶು ಸಂಗೋಪನೆ, ಕೃಷಿಗಿಂತಲೂ ಹೆಚ್ಚಿನ ಲಾಭದಾಯಕ ಹಾಗೂ ಸುಸ್ಥಿರ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ ಎಂದರು. ಆರ್ಥಿಕ ಲಾಭ ತರುವ ಪಶು ಸಂಗೋಪನೆಯಲ್ಲಿ ಸರ್ಕಾರ ಕಾಳಜಿ ವಹಿಸುತ್ತಿದೆ. ಮಾನವನಂತೆ ಅವುಗಳ ಆರೋಗ್ಯ ಸುರಕ್ಷತೆಗೆ ಇರುವ ಅವಕಾಶಗಳನ್ನು ಹೆಚ್ಚಿಸಲಾಗುತ್ತದೆ. ಆಸ್ಪತ್ರೆಗಳು, ವೈದ್ಯರ ಸಂಖ್ಯೆ ಏರಿಕೆ ಮಾಡಲಾಗುತ್ತದೆ. ವೈದ್ಯರಿಗೆ ಪೂರಕವಾಗಿ ಸಹಾಯಕ ಸೇವೆ ಒದಗಿಸುವ ಸಿಬ್ಬಂದಿಗಳ ತಯಾರಿಗಾಗಿ ಪಾಲಿಟೆಕ್ನಿಕ್‍ಗಳ ಸ್ಥಾಪಿಸಲಾಗಿದೆ ಎಂದರು.
ಮಾಂಸದ ಉತ್ಪಾದನೆಯಲ್ಲಿ ಹಾಸನ ಜಿಲ್ಲೆ ಏಳನೇ ಸ್ಥಾನದಲ್ಲಿದ್ದು ಮಾಂಸ ಮಾರಾಟ ದರ ದುಬಾರಿಯಾಗಿದೆ ಕುರಿ ಸಾಕಾಣಿಕೆ ಮಾಡಿರುವ ರೈತ ಮತ್ತು ಕೊಳ್ಳುವ ಜನರ ನಡುವೆ ದಲ್ಲಾಳಿಗಳ ಹಾವಳಿಯಿಂದ ಕುರಿ ಸಾಕಣಿಕೆ ದಾರರಿಗೆ ಹೆಚ್ಚಿನ ಲಾಭ ದೊರೆಯುತ್ತಿಲ್ಲ. ಇದನ್ನು ತಪ್ಪಿಸಲ್ಲು ಎ.ಪಿ.ಎಂ.ಸಿ ಮೂಲಕ ಲೈವ್ ಸ್ಟಾಕ್ ಮಾಂಸವನ್ನು ವೈಜ್ಞಾನಿಕವಾಗಿ ತೂಕ ಮಾಡಿ ರೈತರಿಗೆ ಸಿಗುವಂತೆ ಸರ್ಕಾರ ಯೋಜನೆ ಮಾಡಿದೆ ಇದಕ್ಕೆ ಪೂರಕವಾಗಿ ಪಾಲಿಟೆಕ್ನಿಕೆ ಕಾಲೇಜು ಕಾರ್ಯ ನಿರ್ವಹಿಸಬೇಕು ಎಂದರು.
ರೈತರು ಆರ್ಥಿಕವಾಗಿ ಮುಂದೆ ಬರಲು ಏನನ್ನು ಮಾಡಬಹುದು ಎಂದು ಇಲಾಖೆ ಚಿಂತನೆ ಮಾಡಿ ಕುರಿ ಮತ್ತು ಮೇಕೆ ಸಂಸ್ಕರಣೆ ಕೇಂದ್ರವನ್ನು ಪ್ರಾರಂಭಿಸಿದೆ ಮತ್ತು ಕುರಿ ಸಾಕಾಣಿಕೆ, ಹೊಸದಾಗಿ ಮಾಂಸದ ಅಂಗಡಿಗಳನ್ನು ತೆರೆಯುವವರಿಗೆ 1.5 ಲಕ್ಷ ರೂಪಾಯಿಂದ 3.5 ಲಕ್ಷ ಸಾಲ ಒದಗಿಸಲಾಗುತ್ತದೆ. ಮತ್ತು ಕುರಿ ದನ ಕರುಗಳು ಸಾವಿಗೆ ಪರಿಹಾರ ನೀಡಲಾಗುತ್ತದೆ. ಈವರೆಗೆ ಇದ್ದ ಸುಮಾರು 13 ಕೋಟಿ ರೂಪಾಯಿ ಬಾಕಿಯನ್ನು ಸಂಪೂರ್ಣವಾಗಿ ಬಿಎಉಗಡೆ ಮಾಡಲಾಗಿದೆ ಎಂದು ಸಚಿವ ಎ.ಮಂಜು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜು, ವಿಧಾನ ಪರಿಷತ್ ಸದಸ್ಯರಾದ ಜವರೇ ಗೌಡ, ಗೋಪಾಲ ಸ್ವಾಮಿ, ಮಲೆನಾಡು ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರಾದ ಹೆಚ್.ಪಿ.ಮೋಹನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಕುಮಾರ್, ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಆರ್.ವಿ ಪ್ರಸಾದ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅದ್ಯಕ್ಷರಾದ ಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.