ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಚಿಕ್ಕಮಗಳೂರಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

583

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮತ್ತು ಬಿಜೆಪಿ ಮುಖಂಡರ ದಿಢೀರ್ ಆದಾಯ ಹೆಚ್ಚಳವನ್ನು ಖಂಡಿಸಿ ಯುವ ಕಾಂಗ್ರೇಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ತಕ್ಷಣ ತಡೆಗಟ್ಟುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ.ಶಿವಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಉದ್ಯಮಿಗಳು, ಶ್ರೀಮಂತರು ಮತ್ತು ಬಿಜೆಪಿ ನಾಯಕರಿಗೆ ಅಚ್ಚೇದಿನ್ ಬಂದಿದೆ, ಇದರ ನಡುವೆ ಬಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ಆರೋಪಿಸಿದರು. ಪೆಟ್ರೋಲ್, ಡೀಸಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಒಂದೆಡೆ ಜನ ಸಾಮಾನ್ಯರು ಪರದಾಡುತ್ತಿದ್ದರೆ , ಇನ್ನೊಂದೆಡೆ ಬಿಜೆಪಿ ಮುಖಂಡರ ಆದಾಯದಲ್ಲಿ ದಿಢೀರ್ ಹೆಚ್ಚಳವಾಗುತ್ತಿದೆ ಎಂದು ದೂರಿದರು.

ಪಂಜಾಬ್‍ನ ಗುರುದಾಸ್‍ಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಪತನ ಆರಂಭಗೊಂಡಿದ್ದು, ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲೂ ಆ ಪಕ್ಷ ಸೋಲಲಿದೆ ದೇಶ ಬಿಜೆಪಿ ಮುಕ್ತವಾಗಲಿದೆ ಕಾಂಗ್ರೇಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಮಾತನಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಕಳೆದ 8 ತಿಂಗಳ ಹಿಂದೆ ಕೇವಲ 50 ಸಾವಿರ ರೂ ಬಂಡವಾಳದಲ್ಲಿ ಆರಂಭಿಸಿದ ಕಂಪನಿ ಇದೀಗ 80 ಕೋಟಿ ಆದಾಯ ಗಳಿಸಿರುವುದು ಬೆಳಕಿಗೆ ಬಂದಿದ್ದು,ಈ ಪವಾಡಕ್ಕೆ ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ಮುಖಾಂತರ ದೇಶದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ತ್ರಿಭುವನ್ ಮಾತನಾಡಿ ಬಿಜೆಪಿ ನಾಯಕರು ದೇಶವನ್ನು ಕೊಳ್ಳೆ ಹೊಡೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ ಅವರ ಮನೆಗಳ ಮೇಲೆ ದಾಳಿ ನಡೆಸದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ ಪಕ್ಷದ ಕೈಗೊಂಬೆಗಳಾಗಿ ವಿರೋಧ ಪಕ್ಷಗಳ ಮುಖಂಡರ ಆಸ್ತಿಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದರು. ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಪುಷ್ಪಲತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸಿ.ಮಧು, ಮುಖಂಡರಾದ ಕಾರ್ತಿಕ್, ಕೌಶಿಕ್, ಫಾರೂಕ್, ರತನ್, ತಿಲಕ್, ಆಕಾಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here