ಲಾಕ್‍ಡೌನ್‍ನಿಂದಾಗಿ ಆನ್‍ಲೈನ್ ಶಿಕ್ಷಣ ಭರದಿಂದ ಸಾಗಿದೆ. ತರಗತಿ ಬೋಧನೆಯನ್ನು ನಮ್ಮ ಮನೆ ಬಾಗಿಲಿಗೆ ತರುವ (live stream) ಆ್ಯಪ್‍ಗಳೂ ಕೂಡಾ ಇನ್ನಿಲ್ಲದಂತೆ ತಲೆ ಎತ್ತಿದೆ. ಈಗಾಗಲೇ ಪ್ರಪಂಚದ ಶೇ. 90ರಷ್ಟು ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ 77 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮನೆಯಲ್ಲೇ ಇರುವಂತಾಗಿದೆ. ಹೀಗಿರುವಾಗ ವಿಶ್ವ ವಿದ್ಯಾಲಯಗಳಿಗೆ ಆನ್‍ಲೈನ್ ಶಿಕ್ಷಣ ಇಂದಿನ ಅಗತ್ಯ ಹಾಗೂ ಅವರಿಗೆ ಇದು ಹೊಸದೇನೂ ಅಲ್ಲ. ವಿಶ್ವ ದರ್ಜೆಯ ಭೋದಕರಿಂದ ಮನೆಯಲ್ಲೇ ಕುಳಿತು ಉಪನ್ಯಾಸಗಳನ್ನು ಕೇಳುವ ಅವಕಾಶ ದೊರೆಯುತ್ತದೆ. ಆದರೆ ಮೊನ್ನೆ ತಾನೆ ದಿನ ಪತ್ರಿಕೆಯೊಂದು ಶಾಲಾ ಶುಲ್ಕ ಪಾವಿತಿಸದ LKG ಮಕ್ಕಳನ್ನು ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು ಆನ್‍ಲೈನ್ ಟೀಚಿಂಗ್‍ನಲ್ಲಿ ಬ್ಲಾಕ್ ಮಾಡಿದ್ದರ ಬಗ್ಗೆ ವರದಿ ಮಾಡಿತ್ತು. ನಿಜಕ್ಕೂ ಈ ಪ್ರಕರಣ ಆಘಾತಕಾರಿ. ಅಷ್ಟಕ್ಕೂ ಇದು ಮಕ್ಕಳ ಬೇಸಿಗೆ ರಜೆಯ ಅವಧಿ. ಖಾಸಗಿ ಶಿಕ್ಷಣ ಸಂಸ್ಥೆಗಳು ಪೈಪೋಟಿ ಹಾಗೂ admission ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಪುಟ್ಟ ಮಕ್ಕಳನ್ನೂ ಕೂಡಾ ಮೊಬೈಲ್ ಫೋನ್ ಹಾಗೂ ಲ್ಯಾಪ್‍ಟಾಪ್‍ಗಳ ಮುಂದೆ ಕೂರಿಸುವ ಕಸರತ್ತು ನಡೆಸಿವೆ.
ತರಗತಿ ಶಿಕ್ಷಣದ ಸ್ವರೂಪ, ಅಲ್ಲಿನ ವಾತಾವರಣ ಪರಸ್ಪರ ಸಂವಹನದ ಮೂಲಕ ಮಕ್ಕಳು ಅಲ್ಲಿ ಕಲಿಯುವ ಪ್ರಕ್ರಿಯೆ ಅದ್ಭುತ. ಜ್ಞಾನದೊಂದಿಗೆ ಬದುಕಿಗೆ ಬೇಕಾದ ಎಲ್ಲ ಕೌಶಲಗಳನ್ನೂ ಮಕ್ಕಳು ಅಲ್ಲಿ ಕಲಿಯುತ್ತಾರೆ. ಆನ್‍ಲೈನ್ ಶಿಕ್ಷಣ COVID-19 ಲಾಕ್‍ಡೌನ್‍ನಿಂದ ಬಂದೊದಗಿದ ಅನಿವಾರ್ಯತೆ. ಅದು ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆಗೆ ಪೂರಕವೇ ಹೊರತು ಪರ್ಯಾಯ ಖಂಡಿತಾ ಅಲ್ಲ.

ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಾದ UNESCO ಹಾಗೂ UNISEF ಗಳೂ ಕೂಡಾ ಈ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಅವುಗಳ ಪ್ರಕಾರ ಆನ್‍ಲೈನ್ ಟೀಚಿಂಗ್‍ನಲ್ಲಿ ಮಕ್ಕಳು one to one ಟೀಚಿಂಗ್‍ಗೆ ಒಳಪಡುತ್ತಾರೆ. ತಂತ್ರಜ್ಞಾನದ ಮುಖಾಂತರ ಶಿಕ್ಷಕರಿಂದಲೋ, ಗೆಳೆಯರಿಂದಲೋ cyber exploitation ಗೆ ಒಳಪಡುವ ಸಾಧ್ಯತೆ ಬಹಳಷ್ಠಿರುತ್ತದೆ. ಇಂಟರ್‍ನೆಟ್ ಗೀಳು ಮಕ್ಕಳನ್ನು ಗಟ್ಟಿಯಾಗಿ ಆವರಿಸಿಬಿಡುತ್ತದೆ. ನಮ್ಮೆಲ್ಲರ ಈ ತಂತ್ರಜ್ಞಾನ ಮೋಹದಿಂದಾಗಿ ಪುಟ್ಟ ಹಸುಳೆಗಳೂ ಕೂಡಾ ಇಂಟರ್‍ನೆಟ್ ಸಂಪರ್ಕಕ್ಕೆ ಬರುವಂತಾಗಿರುವುದು ವಿಷಾದನೀಯ.
ಇನ್ನೂ ಆತಂಕಕಾರಿ ವಿಚಾರವೆಂದರೆ ಪ್ರತಿವರ್ಷ ಎಂಜಿನಿಯರಿಂಗ್ ಕಾಲೇಜುಗಳಿಂದ ತೇರ್ಗಡೆಯಾಗಿ ಹೊರಬರುತ್ತಿರುವ ಎಷ್ಟೋ ವಿದ್ಯಾರ್ಥಿಗಳಲ್ಲಿ ಕೌಶಲ ಸೊನ್ನೆ. ಕೇವಲ ಒಣ ಪಠ್ಯದ ವಿಷಯದಲ್ಲಷ್ಟೇ ಅವರು ಪರಿಣಿತರು. ಇದು ಒಂದು ನಿದರ್ಶನವಷ್ಟೇ. ಇನ್ನೂ ಹಲವಷ್ಟು ಸುಶಿಕ್ಷಿತ ವಲಯಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈಗಾಗಲೇ ತಂತ್ರಜ್ಞಾನ ಮೋಹದ ಬಲೆಯಲ್ಲಿ ಸಿಕ್ಕು ನೈತಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ನರಳಿದ್ದೇವೆ. ಮುಂದೆ ಆನ್‍ಲೈನ್ ಶಿಕ್ಷಣವೇ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆವರಿಸಿದರೆ ಆಘಾತಕಾರಿ ಅಂಶಗಳು ಘಟಿಸುವುದರಲ್ಲಿ ಸಂಶಯವಿಲ್ಲ.
ಮಹಾತ್ಮ ಗಾಂಧಿ ಹಾಗೂ ರವೀಂದ್ರ ನಾಥ ಠ್ಯಾಗೋರರ ದೃಷ್ಠಿಯಲ್ಲಿ ಶಿಕ್ಷಣವೆಂದರೆ ಅದು ಮನುಷ್ಯನ ಬದುಕಿನ ಹಾದಿಯನ್ನು ಹಸನುಗೊಳಿಸಲು ಬೇಕಾದ ಎಲ್ಲಾ ಕೌಶಲಗಳನ್ನು ಒದಗಿಸುವ ಮಾಧ್ಯಮ. ಅವನು ಶಿಕ್ಷಿತನಾದರಷ್ಟೇ ಸಾಲದು ಸ್ವಾವಲಂಭಿಯಾಗಿ ಬದುಕನ್ನು ರೂಪಿಸಿಕೊಳ್ಳಲು ಸಬಲನಾಗಬೇಕು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಈ ಅಂಶಗಳನ್ನು ಒಳಗೊಂಡಿದೆಯಾದರೂ ಅನುಷ್ಠಾನ ಸಮರ್ಪಕ ರೀತಿಯಲ್ಲಿ ನಡೆದಿಲ್ಲ. ಆದ್ದರಿಂದ ಪ್ರಸಕ್ತ ತುರ್ತು ಪರಿಸ್ಥಿತಿಯಲ್ಲಿ ಆನ್‍ಲೈನ್ ಶಿಕ್ಷಣ ಅಗತ್ಯ ಇರುವವರಿಗೆ ಪೂರಕವಾಗಿರಬೇಕೇ ಹೊರತು ಒಂದು ವ್ಯವಸ್ಥೆಯ ಪರ್ಯಾಯವಾಗಕೂಡದು.










