ಬೆಂಗಳೂರು : ಮೈಸೂರಿನ ಬಳಿಕ ಇದೀಗ ನಗರದಲ್ಲಿ ನಕಲಿ ನಂದಿನಿ ತುಪ್ಪದ ಜಾಲ ಪತ್ತೆಯಾಗಿದೆ.
ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಂಶಯಗೊಂಡಿದ್ದ ಕೆಎಂಎಫ್ ಅಧಿಕಾರಿಗಳು ನಕಲಿ ತುಪ್ಪ ಪತ್ತೆಗಾಗಿ ಹಲವು ತಂಡಗಳನ್ನು ರಚನೆ ಮಾಡಿ ಬೆಂಗಳೂರಿನ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಸಗಟು ಮಾರಾಟದ ಅಂಗಡಿಗಳು ಮತ್ತು ಗೋದಾಮುಗಳಲ್ಲಿ ಪರಿಶೀಲನೆ ನಡೆಸಿದಾಗ ನಕಲಿ ತುಪ್ಪದ ಜಾಲ ಬಯಲಾಗಿದೆ.
ಪರಿಶೀಲನೆ ವೇಳೆ ನಂದಿನಿ ತುಪ್ಪದ 1,000 ಎಂಎಲ್ ಸ್ಯಾಚೆ ಹಾಗೂ 15 ಕೆಜಿ ತೂಕದ ಟಿನ್ ಗಳು ಪತ್ತೆಯಾಗಿದ್ದು, ಬಳಿಕ 1000 ಮಿಲಿ ಸ್ಯಾಚಿ ಮಾದರಿಯನ್ನು ಎಫ್ಎಸ್ಎಸ್ಎಐಗೆ ರವಾನೆ ಮಾಡಿದ್ದಾರೆ. ಅದೇ ರೀತಿ ಮತ್ತೊಂದು ಮಾದರಿಯನ್ನು ಕೆಎಂಎಫ್ ಗುಣ ಭರವಸೆ ವಿಭಾಗದಲ್ಲಿ ಪರಿಶೀಲನೆ ನಡೆಸಿದಾಗ ನಕಲಿ ತುಪ್ಪ ಎಂಬುವುದು ಪತ್ತೆಯಾಗಿದೆ.
ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ. ಪಿ. ಸುರೇಶ್ ತುಪ್ಪ ಸಗಟು ಮಾರಾಟ ಮಾಡುವ ಸಂಸ್ಥೆ ಮೇಲೆ ದೂರು ನೀಡಿದ್ದು, ಸುರೇಶ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ ಬಸವನಗುಡಿ ಪೊಲೀಸರು, ಕೇಸ್ ದಾಖಲಿಸಿ ನಕಲಿ ತುಪ್ಪದ ತನಿಖೆ ಕೈಗೊಂಡಿದ್ದಾರೆ.










